

ಬೆಂಗಳೂರು: ಈ ಕಾಲದಲ್ಲಿ ಯಾರನ್ನು ನಂಬೋದು ಬಿಡೋದು? ಸ್ವಲ್ಪ ಯಾಮಾರಿದ್ರೂ ಸಂಕಷ್ಟಕ್ಕೆ ಸಿಲುಕಬೇಕಾದೀತು! ಅಪರಿಚಿತರು ಮಾತ್ರವಲ್ಲ, ಸಂಬಂಧಿಕರು, ಸ್ನೇಹಿತರ ಸೋಗಿನಲ್ಲೂ ವಂಚಕರು ಬಲೆ ಬೀಸುತ್ತಾರೆ. ಅಪ್ಪಿತಪ್ಪಿ ಜಾಗ್ರತೆ ತಪ್ಪಿದ್ರೆ ಮಾಡಬಾರದ್ದನ್ನು ಮಾಡಿ ನಡುದಾರಿಯಲ್ಲೇ ಎಸ್ಕೇಪ್ ಆಗ್ತಾರೆ...
ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಕ್, ತನ್ನ ಸ್ನೇಹಿತೆಯಿಂದಲೇ ಮೋಸ ಹೋಗಿದ್ದಾರೆ. ರಾತ್ರೋರಾತ್ರಿ ಹಣ-ಮೊಬೈಲ್ ಎಲ್ಲವನ್ನೂ ಕಳಕೊಂಡು ಬಸ್ ನಿಲ್ದಾಣದಲ್ಲಿ ಖಾಲಿ ಕೈನಲ್ಲೇ ನಿಲ್ಲುವ ದುಸ್ಥಿತಿಯನ್ನ ಎದುರಿಸಿದ್ದಾರೆ. ಕೋವಿಡ್ ಕಾರಣ ಕೆಲಸ ಕಳೆದುಕೊಂಡಿದ್ದ ರೂಪದರ್ಶಿ ರೂಪಾ, 15 ದಿನಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಹೋಟೆಲ್ನಲ್ಲಿ ಇವಳಿಗೆ ಮಾಸಿಕ 70 ಸಾವಿರ ವೇತನ ಕೊಡುವ, ಮಾಡೆಲಿಂಗ್ ಕೆಲಸ ಕೊಡಿಸೋದಾಗಿ ಸೂಫಿಯಾ ಅಲಿಯಾಸ್ ಮಾಯಾ ಎಂಬಾಕೆ ನಂಬಿಸಿ ತನ್ನ ಮನೆಗೆ ಕರೆಸಿಕೊಂಡಿದ್ದಳು.
ಗೆಳತಿ ಸೂಫಿಯಾ ಮಾಡಲಿಂಗ್ ಕೆಲಸ ಕೊಡಿಸುತ್ತಾಳೆಂದು ರೂಪಾ ತುಂಬಾ ಆಸೆಯಿಂದ ಆಕೆಯ ಮನೆಗೆ ಹೋಗಿದ್ದಳು. ನ.1ರ ಮಧ್ಯಾಹ್ನ ತನ್ನ ತಾಯಿಗೆ ಹಣ ಡೆಪಾಸಿಟ್ ಮಾಡಬೇಕು ಎಂದ ರೂಪಾಳನ್ನು ತಡೆದ ಸೂಫಿಯಾ, ಅಂದು ರಾತ್ರಿ ಹಣ ಡೆಪಾಸಿಟ್ ಮಾಡಿಸಲು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಳು. ತಡರಾತ್ರಿ 2ರವರೆಗೂ ಕಾರಿನಲ್ಲಿ ಸುತ್ತಾಡಿಸಿ ರೂಪಾಳನ್ನು ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಬಳಿ ವರಸೆ ಬದಲಿಸಿದ್ದಾಳೆ. ಕಾರಿನ ಡಿಕ್ಕಿಯಲ್ಲಿ ಬ್ಲಾಂಕೇಟ್ ತೆಗೆಯುವಂತೆ ಕಾರಿನಿಂದ ರೂಪಾಳನ್ನು ಕೆಳಗಿಳಿಸಿದ ಸೂಫಿಯಾ, ಕೂಡಲೇ ಆಕೆಯನ್ನು ಅಲ್ಲೇ ಬಿಟ್ಟು ಕಾರಿನಲ್ಲಿ ಎಸ್ಕೇಪ್ ಆಗಿದ್ದಾಳೆ. ರೂಪಾಳ 3 ಲಕ್ಷ ರೂ. ನಗದು, 2 ಮೊಬೈಲ್ ಸಮೇತ ಖತರ್ನಾಕ್ ಸ್ನೇಹಿತೆ ಪರಾರಿಯಾಗಿದ್ದಾಳೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕಿ ಸೂಫಿಯಾಗಾಗಿ ಪೊಲೀಸರು ಬಲೆ ಬೀಸಿದ್ದಾರೆ.