

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚುವ ಪ್ರಕರಣಗಳು ಕಿನ್ನಿಗೋಳಿ ಸುತ್ತಮುತ್ತ ಹೆಚ್ಚಾಗುತ್ತಿವೆ. ಕಳೆದ ಹಲವು ವರ್ಷಗಳಿಂದ ಹಲವು ರೀತಿಯಲ್ಲಿ ಸಂದೇಶ ಕಳುಹಿಸಿ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚುತ್ತಿದ್ದರೆ ಈ ಬಾರಿ ಎ.ಪಿ.ಕೆ. ಎಂಬ ಆ್ಯಪ್ ವಾಟ್ಸ್‌ಆ್ಯಪ್ ಸಂದೇಶ ಮೂಲಕ ಬರುತ್ತದೆ. ಇದನ್ನು ಡೌನ್‌ಲೋಡ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ತಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ.
ಕಿನ್ನಿಗೋಳಿಯ ವ್ಯಕ್ತಿಯೊಬ್ಬರು ಈ ರೀತಿಯಲ್ಲಿ 20 ಸಾವಿರ ರೂ. ಕಳೆದುಕೊಂಡಿದ್ದು, ಹೀಗೆ ಅನೇಕ ಮಂದಿ ಹಣ ಕಳೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂದೇಶ ಹಲವು ಜನರಿಗೆ ಬಂದಿದ್ದು, ಹೆಚ್ಚಾಗಿ ತಮ್ಮ ಪರಿಚಯಸ್ಥರ ಮೊಬೈಲ್‌ನಿಂದಲೇ ಬರುತ್ತದೆ. ಅಂದರೆ ಹಲವು ಜನರ ಮೊಬೈಲ್ ಹ್ಯಾಕ್ ಮಾಡಿ ಆ ಮೊಬೈಲ್‌ನಲ್ಲಿ ಸೇವ್ ಆಗಿರುವ ಎಲ್ಲ ನಂಬರ್‌ಗಳಿಗೆ ಎ.ಪಿ.ಕೆ. ಸಂದೇಶ ರವಾನೆಯಾಗುತ್ತದೆ. ಈ ಸಂದರ್ಭ ಸುಲಭವಾಗಿ ಡೌನ್‌ಲೋಡ್ ಆಗುತ್ತದೆ ಎಂಬುದು ಸೈಬರ್ ಕಳ್ಳರ ಅಲೋಚನೆ.
ಮತ್ತೊಂದು ಪ್ರಕರಣದಲ್ಲಿ ನಿಮ್ಮ ಮೊಬೈಲ್‌ಗೆ 10 ಅಂಕೆಗಳ ಒಂದು ಇಂಟರ್‌ನೆಟ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದಾಗ ‘ಹೇಳಿ ಮೀರಾ ಫೈನಾನ್ಸ್ ಅಥವಾ ಅಲ್ಪಾ ಫೈನಾನ್ಸ್‌ನಿಂದ ಮಾತಾಡುತ್ತಿದ್ದೇವೆ. ನಿಮ್ಮ ಪರಿಚಯಸ್ಥರ ಹೆಸರು ಹೇಳಿ ನಮ್ಮ ಫೈನಾನ್ಸ್‌ನಿಂದ ಲೋನ್ ತೆಗೆದು ನಿಮಗೆ ಕೊಟ್ಟಿದ್ದಾರಂತೆ. ಈಗ ಆ ಲೋನ್ ನೀವು ಕಟ್ಟಬೇಕಾಗುತ್ತದೆ’ ಈ ರೀತಿ ಹೇಳಿ ಮಾತು ಮುಂದುವರಿಸುತ್ತಾರೆ. ಆದರೆ ಲೋನ್ ತೆಗೆದ ಬಗ್ಗೆ ದಾಖಲೆ ಆ ವ್ಯಕ್ತಿಯ ಮೊಬೈಲ್ ನಂಬರ್ ಅಥವಾ ಫೈನಾನ್ಸ್ ಕಚೇರಿಯ ಸಂಖ್ಯೆಯಾಗಲಿ ನೀಡುತ್ತಿಲ್ಲ. ನಿರಂತರ ಒಂದು ದಿನದಲ್ಲಿ 25ರಿಂದ 30 ಬಾರಿ ಕರೆ ಬರುತ್ತದೆ. ಪ್ರತಿಯೊಂದು ಬಾರಿ ಒಂದೊಂದು ನಂಬರ್‌ನಿಂದ ಕರೆ ಮಾಡಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಾರೆ. ಈ ರೀತಿಯ ಬೇರೆ ಬೇರೆ ಪ್ರಕರಣಗಳು ನಡೆಯುತ್ತಿದ್ದು, ಜನರು ಜಾಗ್ರತರಾಗಬೇಕಾಗಿದೆ.