ಮದುವೆ ಆಸೆಯಿಂದ ಸುಂದರಿ ಬಲೆಗೆ ಬಿದ್ದು, 7.6 ಲಕ್ಷ ರೂಪಾಯಿ ಕಳ್ಕೊಂಡ ಟೆಕ್ಕಿ

1
Published on

*ಕನ್ಯೆಗಾಗಿ ಆನ್​ಲೈನ್​ನಲ್ಲಿ ಹುಡುಕಾಡಿ ಮೋಸ ಹೋದ *ವೈಟ್​ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಮದುವೆ ಮಾಡಿಕೊಳ್ಳಲು ಆನ್​ಲೈನ್​ನಲ್ಲಿ ಹುಡುಕಾಟ ನಡೆಸಿದ್ದ ಟೆಕ್ಕಿಗೆ ಪರಿಚಯವಾಗಿದ್ದ ಸುಂದರ ಯುವತಿ, 7.6 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ಮಾರತ್ತಹಳ್ಳಿಯ ವಿನಾಯಕ ಲೇಔಟ್ ನಿವಾಸಿ 30 ವರ್ಷದ ಸಾಫ್ಟ್​ವೇರ್ ಇಂಜಿನಿಯರ್ ವಂಚನೆಗೊಳಗಾದವ. ಮೇಯ್ಬೆಲ್ ಎಡ್ವಾರ್ಡ್, ಕ್ರಿಸ್ ಜೆಫ್ ಎಂಬುವರ ವಿರುದ್ಧ ವೈಟ್​ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ ಅವಿವಾಹಿತನಾಗಿದ್ದು, ಮದುವೆ ಮಾಡಿಕೊಳ್ಳಲು ಆನ್​ಲೈನ್​ನಲ್ಲಿ ವಧುವಿಗಾಗಿ ಹುಡುಕಾಟ ನಡೆಸಿದ್ದ. ಮೇಯ್ಬೆಲ್ ಎಡ್ವಾರ್ಡ್ ಎಂಬ ಯುವತಿ ಪರಿಚಯವಾಗಿದ್ದಳು. ಬಳಿಕ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಟೆಕ್ಕಿ ಮದುವೆಯಾಗುವ ಆಶಯವನ್ನು ಯುವತಿಯ ಮುಂದಿಟ್ಟಿದ್ದು, ಅದಕ್ಕೆ ಆಕೆ ಒಪ್ಪಿಗೆ ಸೂಚಿಸಿದ್ದಳು.

ಕೆಲ ದಿನಗಳ ಬಳಿಕ ನಗರದಲ್ಲಿ ಮನೆ ಖರೀದಿಸಲು ನಿರ್ಧರಿಸಿದ್ದೇನೆ. ಹಣ ಕಡಿಮೆಯಾಗಿದೆ. ಆಪ್ತರೊಬ್ಬರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ನೀನು ಕೂಡ ಹಣ ಹೊಂದಿಸಿದರೆ ಅನುಕೂಲವಾಗುತ್ತದೆ ಎಂದಿದ್ದಳು. ಆಕೆಯ ಮಾತನ್ನು ನಂಬಿದ ಟೆಕ್ಕಿ ಸಹಾಯ ಮಾಡುವುದಾಗಿ ಹೇಳಿದ್ದ. ಆ.8ರಂದು ಮಹದೇವಪುರದ ಫಿನಿಕ್ಸ್ ಶಾಪಿಂಗ್ ಮಾಲ್ ಬಳಿ ಬರುವಂತೆ ಆಕೆ ಸೂಚಿಸಿದ್ದಳು. ಅಲ್ಲಿಗೆ ಹೋಗಿದ್ದ ಟೆಕ್ಕಿ, ಕ್ರಿಸ್ ಜೆಫ್ ಎಂಬಾತನಿಗೆ 95 ಸಾವಿರ ರೂ. ಕೊಟ್ಟಿದ್ದ. ನಂತರ ಹಂತಹಂತವಾಗಿ 6.7 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಹಣ ಪಡೆದ ನಂತರ ಆಕೆ ಸಂಪರ್ಕಕ್ಕೆ ಸಿಗದೇ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಟೆಕ್ಕಿ ದೂರು ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net