

ಬೆಂಗಳೂರು: ಬ್ಯಾಂಕ್ ಸಹಾಯವಾಣಿಯನ್ನು ಗೂಗಲ್ನಲ್ಲಿ ಸರ್ಚ್ ಮಾಡಿ ಕರೆ ಮಾಡಿದ ಯುವತಿಗೆ 500 ರೂ. ರಿಫಂಡ್ ಮಾಡುವ ಸೋಗಿನಲ್ಲಿ ಸೈಬರ್ ಕಳ್ಳರು 57 ಸಾವಿರ ರೂ. ಕನ್ನ ಹಾಕಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಐಟಿಪಿಎಲ್ ಮುಖ್ಯ ರಸ್ತೆ ಹೂಡಿಯಲ್ಲಿ ನೆಲೆಸಿರುವ ಯುವತಿ ವಂಚನೆಗೆ ಒಳಗಾದವರು. ಖಾಸಗಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಯುವತಿಯ ಖಾತೆಯಿಂದ 500 ರೂ. ಕಡಿತವಾಗಿತ್ತು. ಇದನ್ನು ಗಮನಿಸಿದ ಯುವತಿ, ವಿಚಾರಣೆ ಮಾಡಲು ಗೂಗಲ್ನಲ್ಲಿ ತನ್ನ ಬ್ಯಾಂಕಿನ ಟೋಲ್ ಫ್ರೀ ನಂಬರ್ ಸರ್ಚ್ ಮಾಡಿ ಅದರಲ್ಲಿ ಸಿಕ್ಕ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ನಿಮಗೆ ರಿಫಂಡ್ ಮಾಡುತ್ತೆವೆ ಎಂದು ಹೇಳಿ ಯುವತಿಯ ಬ್ಯಾಂಕ್ ಖಾತೆ ವಿವರ ಮತ್ತು ಒಟಿಪಿ ನಂಬರ್ ಸಹ ಪಡೆದುಕೊಂಡು 57,509 ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದಾಗ ಸಣ್ಣ ತಪ್ಪಿನಿಂದ ಹಣ ವರ್ಗಾವಣೆ ಆಗಿದೆ. ವಾಪಸ್ ಜಮೆ ಮಾಡುತ್ತೆವೆ ಎಂದು ಹೇಳಿ ಮತ್ತೆ ಒಟಿಪಿ ನಂಬರ್ ಕೇಳಿದ ಆಗ ಅನುಮಾನ ಬಂದು ಕರೆ ಕಟ್ ಮಾಡಿದ್ದಾರೆ.
ನೊಂದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯಾವುದೇ ಸಹಾಯವಾಣಿಯನ್ನು ಗೂಗಲ್ ಸರ್ಚ್ ಮಾಡಿ ಕರೆ ಮಾಡುವುದು ಸರಿಯಾದ ವಿಧಾನವಲ್ಲ. ಸಂಬಂಧಪಟ್ಟ ಬ್ಯಾಂಕ್ ಅಥವಾ ಕಂಪನಿ ಕೊಟ್ಟಿರುವ ಅಧಿಕೃತ ಸಹಾಯವಾಣಿಗೆ ಕರೆ ಮಾಡಿ ವಿಚಾರಣೆ ನಡೆಸಬೇಕು. ಸೈಬರ್ ಕಳ್ಳರು, ವಂಚನೆ ಮಾಡುವ ಉದ್ದೇಶಕ್ಕೆ ಗೂಗಲ್ನಲ್ಲಿ ತಮ್ಮ ನಂಬರ್ ನಮೂದು ಮಾಡಿ ವಂಚನೆ ಮಾಡುತ್ತಾರೆ ಎಂದು ವೈಟ್ಫೀಲ್ಡ್ ವಿಭಾಗ ಸಿಇಎನ್ ಪೊಲೀಸರು ಸಲಹೆ ನೀಡಿದ್ದಾರೆ.