

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ನೀಡುವವನೇ ಗುರು. ಗುರುವಿನ ಮಹಿಮೆ ಅಪಾರವಾಗಿದ್ದು, ಗುರುವಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಗುರು ಇಲ್ಲದಿದ್ದರೆ ಜೀವನವೇ ಶೂನ್ಯವಾಗುತ್ತದೆ ಎಂದು ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಹೇಳಿದರು.
ಬೆಳ್ತಂಗಡಿಯ ನಾರಾವಿ ಬಳಿ ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿ ಬಸದಿಯಲ್ಲಿ ತಮ್ಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಗುರುಪೂರ್ಣಿಮೆಯ ದಿನ ಮಂಗಳ ಕಲಶ ಸ್ಥಾಪನೆ ಸಮಾರಂಭದಲ್ಲಿ ಮಂಗಳ ಪ್ರವಚನ ನೀಡಿ, ಗುರುಗಳ ಮೂಲಕ ಆತ್ಮನ ನಿಜಸ್ವರೂಪವನ್ನು ತಿಳಿದು ವ್ರತ-ನಿಯಮಗಳ ಪಾಲನೆ, ಸ್ವಾಧ್ಯಾಯ, ಜಪ, ತಪ, ಧ್ಯಾನ, ಸತ್ಯ, ಅಹಿಂಸೆ, ಅಪರಿಗ್ರಹ ಮೊದಲಾದ ಪಂಚಾಣು ವ್ರತಗಳ ಪಾಲನೆಯೊಂದಿಗೆ, ರತ್ನತ್ರಯ ಧರ್ಮದ ಅನುಷ್ಠಾನದಿಂದ ಅಕ್ಷಯ ಸುಖವನ್ನೀಯುವ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ ಎಂದರು.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಕಾಲ್ನಡಿಗೆಯಲ್ಲೆ ಸಂಚರಿಸಿ ಧರ್ಮಪ್ರಭಾವನೆ ಮಾಡುವ ಮುನಿಗಳು, ಸಾಧು-ಸಂತರು, ಮಾತಾಜಿಯವರು ನಡೆದಾಡುವ ದೇವರು. ಅವರ ವಾಸ್ತವ್ಯ, ದರ್ಶನ ಮತ್ತು ಸೇವೆಯಿಂದ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಬದುಕಿನಲ್ಲಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದರು.
ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಮಾತನಾಡಿ, ಚಾತುರ್ಮಾಸ್ಯ ಜ್ಞಾನಸಂಪಾದಿಸುವ ಜ್ಞಾನಯಜ್ಞವಾಗಿದ್ದು, ಆತ್ಮಕಲ್ಯಾಣಕ್ಕೆ ಪ್ರೇರಕವಾಗಿದೆ. ಮಾತಾಜಿಯವರ ಶ್ರದ್ಧಾ-ಭಕ್ತಿಯ ಸೇವೆಯಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕಿ ಜಿವನ ಪಾವನವಾಗುತ್ತದೆ ಎಂದರು.
ಅಂಡಾರು ಗುಣಪಾಲ ಹೆಗ್ಡೆ ಶುಭಾಶಂಸನೆ ಮಾಡಿದರು. ಸುದರ್ಶನ ಜೈನ್ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆ ಹೃದಯ ಶ್ರೀಮಂತಿಕೆಯೊಂದಿಗೆ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಮೊದಲ ಮಂಗಳ ಕಲಶವನ್ನು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು ಸ್ಥಾಪನೆ ಮಾಡಿದರು. ನಿರೀಕ್ಷಾ ಹೊಸ್ಮಾರು ಸುಶ್ರಾವ್ಯ ಜಿನಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ಪ್ರೇಮ್‌ಕುಮಾರ್ ಸ್ವಾಗತಿಸಿದರು. ಶಿಶುಪಾಲ ಜೈನ್ ನಾರಾವಿ ವಂದಿಸಿದರು. ನಿರಂಜನ ಜೈನ್ ನಿರೂಪಿಸಿದರು. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷ ಪೂಜೆ, ಆರಾಧನೆ, ಸಾಮೂಹಿಕ ವ್ರತೋಪದೇಶ, ಮಾತಾಜಿಯವರಿಂದ ಮಂಗಳ ಪ್ರವಚನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.