

ಬೆಂಗಳೂರು: 'ಜಯಪತ್ರ' ಶಾಸನಗಳ ಅಧ್ಯಯನದಿಂದ ಪ್ರಾಚಿನ ಭಾರತದ ಸಾಂಸತಿಕ, ಸಾಹಿತ್ಯಕ ಮತ್ತು ಕಾನೂನಾತ್ಮಕ ಇತಿಹಾಸವನ್ನು ವಿವರವಾಗಿ ತಿಳಿಯಲು ಸಾಧ್ಯವಾಗುತ್ತದೆ ಎಂದು ಪುರಾತತ್ವ ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಹೇಳಿದ್ದಾರೆ.
ಮಿಥಿಕ್ ಸೊಸೈಟಿ ಆಯೋಜಿಸಿದ್ದ ಓರುಗಂಟಿ ರಾಮಚಂದ್ರಯ್ಯ ಸ್ಮಾರಕ ದತ್ತಿ ಉಪನ್ಯಾಸದಲ್ಲಿ 'ಐತಿಹಾಸಿಕ ದಾಖಲೆಗಳಾಗಿ ಜಯಪತ್ರ ಶಾಸನಗಳು' ವಿಷಯ ಕುರಿತು ಮಾತನಾಡಿದರು.
ಭಾರತೀಯ ಇತಿಹಾಸಕ್ಕೆ ಸಂಬಂಧಿಸಿ 'ಜಯಪತ್ರ'ದ ಉದಾಹರಣೆ ಮೊದಲ ಬಾರಿಗೆ ಪ್ರಾಚಿನ ಜಾವಾ ಭಾಷೆಯಲ್ಲಿ ಬರೆದ ಕ್ರಿ.ಶ. 928ರ ಜಾವಾ ದ್ವೀಪದ ಶಾಸನದಲ್ಲಿ ದೊರೆಯುತ್ತದೆ. ಕರ್ನಾಟಕದ ಇತಿಹಾಸವನ್ನು ಗಮನಿಸಿದಾಗ ಗುಣಮಧುರನ ಶಾಸನ, ಕಪ್ಪೆ ಅರಭಟ್ಟನ ಶಾಸನ ಮತ್ತು ಶ್ರವಣಬೆಳಗೊಳದ ನಂದಿ ಸೇನ ಮುನಿಯ ಶಾಸನ ಜಯಪತ್ರ ಶಾಸನಗಳಿಗೆ ಪ್ರಮುಖ ಉದಾಹರಣೆಗಳಾಗಿವೆ. ಜತೆಗೆ ಕೌಟಿಲ್ಯನ ಅರ್ಥಶಾಸ, ನಾರದ ಮತ್ತು ಬೃಹಸ್ಪತಿ ಅವರ ಗ್ರಂಥಗಳಲ್ಲಿಯೂ ಇದರ ಉಲ್ಲೆಖವಿದೆ ಎಂದರು.
ಜಯಪತ್ರಗಳು ಸಾಧಕರಿಗೆ ನೀಡುವ ಪ್ರಶಂಸಾ ಪತ್ರಗಳಾಗಿದ್ದವು. ಜತೆಗೆ ನಾಗರಿಕ ವ್ಯವಹಾರಗಳು ಮತ್ತು ತಾತ್ವಿಕ ಚರ್ಚೆಗಳಿಗೆ ಸಂಬಂಧಿಸಿದಂತೆಯೂ ನೀಡಲಾಗುತ್ತಿತ್ತು. ಕಲ್ಯಾಣ ಚಾಲುಕ್ಯರ ಹೆಸರಾಂತ ದೊರೆಯಾದ 6ನೇ ವಿಕ್ರಮಾದಿತ್ಯನ ಕಾಲದ ಆಸ್ಥಾನ ವಿದ್ವಾಂಸರಾದ ಬಿಲ್ಹಣನ ಸಾಹಿತ್ಯದಲ್ಲಿಯೂ ಈ ಬಗೆಗಿನ ವಿವರಗಳು ದೊರೆಯುತ್ತವೆ ಎಂದು ತಿಳಿಸಿದರು.
ಕೆ.ಟಿ. ಅಪ್ಪಣ್ಣ ಸ್ಮಾರಕ ದತ್ತಿ ಉಪನ್ಯಾಸದಲ್ಲಿ 'ಆಹಾರಗಳಲ್ಲಿ ವಿಷ ಸೇರ್ಪಡೆ' ಕುರಿತು ತಜ್ಞೆ ಡಾ.ಪ್ರೇಮಾ ಮಾತನಾಡಿ, ಸಮಕಾಲೀನ ಜಗತ್ತಿನಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗಿದ್ದು, ಯಾಂತ್ರೀಕರಣದ ಮೂಲಕ ಆಹಾರ ವ್ಯವಸ್ಥೆಯ ನಿರ್ವಹಣೆ ಪ್ರಾರಂಭವಾಗಿದೆ ಎಂದರು. ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ಕೃಷಿ ಸಂಸ್ಥೆಗಳೂ ಕೂಡ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿವೆ. ಪರಿಣಾಮ, ನಾವು ಬಳಸುತ್ತಿರುವ ಶಾಕಾಹಾರ ಮತ್ತು ಮಾಂಸಾಹಾರದಲ್ಲಿ ವಿಷದ ಪ್ರಮಾಣ ಹೆಚ್ಚಾಗುತ್ತಿದೆ. ದ್ವೀತಿಯ ಮಹಾಯುದ್ಧದ ನಂತರ ಎದುರಾದ ಆಹಾರದ ಕೊರತೆ, ಆಹಾರ ಉತ್ಪಾದನೆಯ ಯಾಂತ್ರೀಕರಣ ಮತ್ತು ವ್ಯಾಪಾರೀಕರಣಕ್ಕೆ ಕಾರಣವಾಯಿತು. ಇದರ ಕುರಿತು ತೀವ್ರ ಚಿಂತನೆ ಅವಶ್ಯಕತೆಯಿದೆ ಎಂದರು.