

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ನಿಂದ ನೀಡಲಾಗುವ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟಗೊಂಡಿದ್ದು, "ಚಾವುಂಡರಾಯ ದತ್ತಿ ಪ್ರಶಸ್ತಿ''ಗೆ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ, "ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ಪ್ರಶಸ್ತಿ''ಗೆ ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಭಾಜನರಾಗಿದ್ದಾರೆ. "ಕನ್ನಡ ಕಾಯಕ ಪ್ರಶಸ್ತಿ'ಗೆ ಕನ್ನಡಪರ ಹೋರಾಟಗಾರ ಬಸವಲಿಂಗ ಸ್ವಾಮೀಜಿ (ಮಹಾರಾಷ್ಟ್ರ), ಸಾಹಿತಿ ಡಾ. ಆರ್.ಶಂಕರಪ್ಪ ಹಾಗೂ ರಂಗಭೂಮಿ ಕಲಾವಿದ ಕೆ. ಇಮಾಮ ಸಾಬ ಆಯ್ಕೆಯಾಗಿದ್ದಾರೆ.
"ಚಾವುಂಡರಾಯ ದತ್ತಿ ಪ್ರಶಸ್ತಿ''ಯು 30 ಸಾವಿರ ರೂ. ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಉಳಿದ ಪ್ರಶಸ್ತಿ ಪುರಸತರಿಗೆ ತಲಾ 10 ಸಾವಿರ ರೂ. ನಗದು, ಪ್ರಶಸ್ತಿಪತ್ರ ಹಾಗೂ ಫಲಕ ನೀಡಿ ಸನ್ಮಾನಿಸಲಾಗುವುದು.
ಅ.21ರಂದು ಪ್ರದಾನ: ಅ.21ರ ಸಂಜೆ 4.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ದಾನಿಗಳಾದ ಡಾ. ಪದ್ಮಿನಿ ನಾಗರಾಜು, ಎನ್.ಕೆ. ರಮೇಶ್, ವ.ಚ.ಚನ್ನೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.