

ಚನ್ನಪಟ್ಟಣ
ತಾಲೂಕಿನ ಪ್ರತಿಭೆ ಅಬ್ಬೂರು ಪ್ರಕಾಶ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿ ಬಹುಮಾನಗಳನ್ನು ಅಕಾಡೆಮಿ ಅಧ್ಯಕ್ಷ ಎನ್.ಎಲ್.ಮಂಕುಂದರಾಜ್ ಘೋಷಣೆ ಮಾಡಿದ್ದು, ಅದರಂತೆ 2023 ನೇ ಸಾಲಿನ ಲೇಖಕರ ಮೊದಲ ಸ್ವತಂತ್ರ ಕೃತಿ ( ಮಧುರಾಚೆನ್ನ ದತ್ತಿ ಬಹುಮಾನ) ಕ್ಕೆ ಅಬ್ಬೂರು ಪ್ರಕಾಶ ರವರ ಕಣ್ವ ಕನ್ನಡಿಯಲ್ಲಿ ಪುಸ್ತಕ ಆಯ್ಕೆಗೊಂಡಿದೆ.
ತಾಲೂಕಿನ ಅಬ್ಬೂರು ಗ್ರಾಮದ ರಂಗೇಗೌಡ ಹಾಗೂ ವೆಂಕಟಮ್ಮ ದಂಪತಿಗಳ ಪುತ್ರರಾದ ಅಬ್ಬೂರು ಪ್ರಕಾಶ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಬ್ಬೂರು ಗ್ರಾಮದಲ್ಲಿ, ಮಾಧ್ಯಮಿಕವನ್ನು ದಶವಾರದಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ನಾಗವಾರದ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಮುಗಿಸಿ, ಕಾಲೇಜು ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಪೂರೈಸಿ, ಬೆಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿರುವ ಇವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮೂರು ದಶಕಗಳ ಕೆಲಸ ಮಾಡಿ, ಜಂಟಿ ನಿರ್ದೇಶಕರಾಗಿ ನಿವೃತ್ತಿಗೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪತ್ನಿ ಸುಧಾ ಹಾಗೂ ಪುತ್ರ ಸೂರ್ಯ ಜೊತೆಗೆ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.
ಕಣ್ಣ ಕನ್ನಡಿಯಲ್ಲಿ ಅಬ್ಬೂರಿನ ಚಿತ್ರಗಳು, ಇವರ ಮೊದಲ ಪುಸ್ತಕವಾಗಿದ್ದು, ಇವರ ಚೊಚ್ಚಲ ಪುಸ್ತಕ ಅಕಾಡೆಮಿ ದತ್ತಿ ಬಹುಮಾನಕ್ಕೆ ಆಯ್ಕೆಯಾಗಿರುವುದು ವಿಶೇಷ. ವೃತ್ತಿಯ ಜೊತೆ ಜೊತೆಗೆ ಮೊದಲಿನಿಂದಲೂ ಸಾಹಿತ್ಯಶಕ್ತರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಈ ಹಿಂದೆ ಇವರು ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅಬ್ಬೂರು ಅಣೆಕಟ್ಟು ಸ್ಥಿತಿಗತಿಯ ಬಗ್ಗೆಗಿನ ಬರಹ, ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಮನಸೆಳೆದ ಕಾರಣ, ಅಣೆಕಟ್ಟು ಅಭಿವೃದ್ಧಿಗೆ ಐದು ಕೋಟಿ ಅನುದಾನ ಬಿಡುಗಡೆಯಾಗಿದನ್ನು ಸ್ಮರಿಸಬಹುದು. ಕಣ್ವ ಕನ್ನಡಿ ಪುಸ್ತಕದ ಜೊತೆಗೆ ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ,: ಮಕ್ಕಳ ಕಥೆಗಳನ್ನು ಸಹ ಅನುವಾದಿಸಿದ್ದಾರೆ. ಅಕಾಡೆಮಿ ಬಹುಮಾನ ಪಡೆದಿರುವ ಇವರನ್ನು ಬಂಧು ಮಿತ್ರರು ಅಭಿನಂದಿಸಿದ್ದಾರೆ.
ವಿಶೇಷ ಪುಸ್ತಕ;
ತನ್ನ ಸ್ವಗ್ರಾಮವಾದ ಅಬ್ಬೂರಿನ ಚಿತ್ರಗಳು ಎಂಬ ಒಕ್ಕಣೆಯೊಂದಿಗೆ ಆರಂಭವಾಗಿದ್ದ ಇವರ ಕಣ್ವ ಕನ್ನಡಿ ಪುಸ್ತಕ, ಕೆಲವೆಡೆ ಒಂದು ಗ್ರಾಮದ ವರದಿಯಾಗದೇ, ಗ್ರಾಮೀಣ ಸೊಬಗಿನ ಚಿತ್ರಣ ಹಾಗೂ ಸೊಗಡನ್ನು
ಸರಳವಾಗಿ ನಿರೂಪಿಸುವ ಕಥನಶೈಲಿಯಲ್ಲಿ, ಓದುಗರಿಗೆ ಮುದಕೊಟ್ಟಿತ್ತು. ಜಾತಿ ಪದ್ಧತಿ, ಮರೆಯಾಗುವ ಬೇಸಾಯದ ಜಮೀನು, ಕೆರೆ ನುಂಗುವವರು, ಸಂತೆ, ಮಠ, ದೇಗುಲ ಜಾತ್ರೆ ಇವೆಲ್ಲವೂ ಓದುಗರಿಗೆ ಕಣ್ಮುಂದೆ ತರುವಂಥ ನಿರೂಪಣೆ ಪುಸ್ತಕದಲ್ಲಿದೆ.