

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಬಸವಪ್ಪ, ಚಾಮುಂಡೇಶ್ವರಿ ಪುಣ್ಯ ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಭೀಮನ ಅಮಾವಾಸ್ಯೆ ಪ್ರಯುಕ್ತ ಗುರುವಾರ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮೂರು ಮಹಾಮಂಗಳಾರತಿ ನಡೆಯಿತು. ಸಾವಿರಾರು ಮಂದಿ ದೇವಿಯ ದೀಪಾರತಿಯನ್ನು ಕಣ್ತುಂಬಿಕೊಂಡರು.
ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ನಡೆಯಿತು. ಮಧ್ಯಾಹ್ನ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೆಶ್ ಗುರೂಜೀ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ರಥೋತ್ಸವಕ್ಕೆ ಭಕ್ತರು ಹಣ್ಣು, ಜವನ ಎಸೆದು ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.
ಲಕೂ ಹೆಚ್ಚು ಭಕ್ತರು ಆಗಮಿಸಿದ್ದರು. ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಕ್ಷೇತ್ರದಲ್ಲಿ ನಡೆದ ಭೀಮನ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೃತಕ ಜಲಪಾತ ಲೋಕಾರ್ಪಣೆ! ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೃತಕ ಜಲಪಾತವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ದೇವಿಯ ಹಿಂಭಾಗದಲ್ಲಿರುವ ಕೃತಕ ಪರ್ವದ ತುದಿಯಿಂದ ನೀರು ಧುಮ್ಮಿಕ್ಕಿ ಹರಿಯುವ ವ್ಯವಸ್ಥೆ ಭಕ್ತರ ಕಣ್ಮನ ಸೆಳೆಯಿತು. ತಹಸೀಲ್ದಾರ್ ಗಿರೀಶ್, ಡಿವೈಎಸ್ಪಿ ಗಿರಿ ಇತರರು ಇದ್ದರು. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ! ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ ತಾಲೂಕು ಅಷ್ಟೇ ಅಲ್ಲದೇ ನಮ್ಮ ಜಿಲ್ಲೆಗೆ ಒಂದು ಕಿರೀಟವಿದ್ದಂತೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ನೆರವು ಕೊಡಿಸುವ ಜವಾಬ್ದಾರಿ ಮಾಡುತ್ತೇನೆ. ಈಗಾಗಲೇ ಚನ್ನಪಟ್ಟಣದಿಂದ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ಧಿಗೆ 32 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಇದರೊಂದಿಗೆ, ಇನ್ನುಳಿದ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿವರ್ಷವೂ ಭೀಮನ ಅಮಾವಾಸ್ಯೆ ಬಹಳ ವಿಶೇಷವಾಗಿ ನಡೆಯುತ್ತದೆ. ಈ ಬಾರಿ ಲಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆ ಸೇರಿ ತಾಲೂಕು ಆಡಳಿತ ಸಹಕಾರ ನೀಡಿದೆ. ಇದಲ್ಲದೇ ಸಾವಿರಾರು ಮಂದಿ ಸ್ವಯಂಸೇವಕರಾಗಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ್ದಾರೆ. > ಡಾ.ಮಲ್ಲೆಶ್ ಗುರೂಜೀ, ಕ್ಷೇತ್ರದ ಧರ್ಮದರ್ಶಿಗಳು.