ಅವ್ಯವಸ್ಥೆಯ ಆಗರ ಬೆಂ-ಮೈ ಹೆದ್ದಾರಿ!

1003770994
Published on

* ಅನಿಲ ಪೂರೈಕೆ ಪೈಪ್‌ಲೈನ್ ಅವಾಂತರ

*  ನಿಯಮ ಗಾಳಿಗೆ ತೂರಿ ಅಡ್ಡಾದಿಡ್ಡಿ ಸಂಚಾರ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ಹೆದ್ದಾರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ರಸ್ತೆಯಲ್ಲಿಯೇ ವಾಹನ ನಿಲುಗಡೆ, ಅಡ್ಡಾದಿಡ್ಡಿ ಚಾಲನೆ, ವಿರುದ್ಧ ದಿಕ್ಕಿನ ಪಯಣ, ರಸ್ತೆಯಲ್ಲಿ ಹರಿಯುವ ಕಲುಷಿತ ನೀರು, ಅನಿಲ ಪೂರೈಕೆ ಪೈಪ್‌ಲೈನ್ ಜೀತಿ ಹೀಗೆ ಹಲವು ಕಾರಣಗಳಿಂದ ವಾಹನ ಸವಾರರು ಹೈರಣಾಗುತ್ತಿದ್ದಾರೆ.

ಹೌದು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಪ್ರಾರಂಭವಾದ ನಂತರ ನಗರದಲ್ಲಿನ ಹಳೇ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕೊಂಚಮಟ್ಟಿಗೆ ಕಡಿಮೆಯಾಗಿದೆಯಾದರೂ, ಸ್ಥಳೀಯರು ಸೇರಿ ಅಕ್ಕಪಕ್ಕದ ತಾಲೂಕಿನ ಜನತೆ ಈ ಹೆದ್ದಾರಿಯನ್ನೇ ಅವಲಂಬಿಸಿದ್ದಾರೆ. ಆದರೆ, ಈ ಹೆದ್ದಾರಿ ಹಲವು ಕಾರಣಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಗ್ಯಾಸ್ ಪೈಪ್ ಲೈನ್ ಅವಾಂತರ!

ಮದ್ದೂರಿನಿಂದ ರಾಮನಗರದವರೆಗೆ ಮನೆಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆಗಾಗಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಹೆದ್ದಾರಿ ಬದಿಯನ್ನು ಅಗೆಯಲಾಗಿದೆ. ಆದರೆ, ಸರಿಯಾಗಿ ಗುಂಡಿ ಮುಚ್ಚದಿರುವುದರಿಂದ ತೊಂದರೆಯಾಗುತ್ತಿದೆ. ಮದ್ದೂರು, ಚನ್ನಪಟ್ಟಣ ಹಾಗೂ ರಾಮನಗರದ ಮನೆಗಳಿಗೆ ಅಡುಗೆ ಅನಿಲ ಪೂರೈಸಲು ಈಗಾಗಲೇ ಮೂರು ನಗರಗಳ ಒಳ‘ಭಾಗದ ರಸ್ತೆಗಳಲ್ಲಿ ಪೈಪ್‌ಲೈನ್ ಅನ್ನು ಬಹುತೇಕ ಅಳವಡಿಸಲಾಗಿದೆ. ಆದರೆ, ಮದ್ದೂರಿನಿಂದ ರಾಮನಗರದವರೆಗೆ ದೊಡ್ಡ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಹಲವು ತಿಂಗಳಿಂದ ನಡೆಯುತ್ತಿದೆ. ಪೈಪ್ ಅಳವಡಿಸಿದ ನಂತರ, ರಸ್ತೆಯನ್ನು ಮುಂಚಿನಂತೆ ದುರಸ್ತಿ ಮಾಡದ ಕಾರಣ ಸಮಸ್ಯೆಉಂಟಾಗಿದೆ.

ರಸ್ತೆಯಲ್ಲೇ ಚರಂಡಿ ನೀರು!!

ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನೀರು ಹರಿಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಂಡೂಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ನಗರ ವ್ಯಾಪ್ತಿಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಫುಟ್‌ಪಾತ್, ಚರಂಡಿ ಸೇರಿ ವಿವಿಧ ಕಾಮಗಾರಿ ನಡೆಸಲಾಗಿತ್ತು. ಆದರೆ, ನಗರದ ಮಂಗಳವಾರ ಪೇಟೆ ಬಳಿ ಇರುವ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಚರಂಡಿ ಕಾಮಗಾರಿ ಕೊನೆಯಾಗಿದ್ದು, ಅಲ್ಲಿಂದ ಚರಂಡಿ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದೆ. ಇದರಿಂದಾಗಿ ಅನ್ನಪೂರ್ಣೇಶ್ವರಿ ಬಡಾವಣೆ ಸೇರಿ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದು, ವಾಹನಗಳು ಸಂಚರಿಸುವುದರಿಂದ ಸಿಡಿದ ಚರಂಡಿ ನೀರು ಆ ಮಾರ್ಗದಲ್ಲಿ ಓಡಾಡುವ ಜನರ ಮೇಲೆ ಬೀಳುತ್ತಿರುವುದರಿಂದ ಸಮಸ್ಯೆ ಅನುಭವಿಸುವಂತಾಗಿದೆ. ಇದರೊಂದಿಗೆ, ನಗರದ ಗಾಂಧಿ‘ವನದ ಸಮೀಪ ಸೇರಿ ಕೆಲವೆಡೆ ಮಳೆಬಂದಾಗ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದು ಸಮಸ್ಯೆ ತಂದೊಡ್ಡಿದೆ.

ಅಡ್ಡಾದಿಡ್ಡಿ ಸಂಚಾರ!

ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಜತೆಗೆ, ರಸ್ತೆಯಲ್ಲಿ ವಿರುದ್ಧ ದಿಕ್ಕಿನ ಸಂಚಾರವೂ ಹೆಚ್ಚಾಗಿದೆ. ರಸ್ತೆ ವಿಭಜಕ ಮುಚ್ಚಿರುವ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುವುದು ಸಾಮಾನ್ಯ ಎನಿಸಿದೆ. ಈ ಬಗ್ಗೆ ಸಂಚಾರ ವಿಭಾಗದ ಪೊಲೀಸರು ಗಮನವಹಿಸದ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿರುವ ಹೋಟೆಲ್, ಬಾರ್ ಸೇರಿ ವಿವಿಧ ಅಂಗಡಿಗಳ ಮುಂ‘ಾಗ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿರುವುದೂ ಸುಗಮ ಸಂಚಾರಕ್ಕೆ ತೊಡಕಾಗಿದೆ. ಒಟ್ಟಾರೆ, ನಗರದಲ್ಲಿ ಹಾದುಹೋಗಿರುವ ಬೆಂ-ಮೈ ಹಳೆಯ ಹೆದ್ದಾರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ರಸ್ತೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಹೆದ್ದಾರಿಯುದ್ದಕ್ಕೂ ಹಲವೆಡೆ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳು ಸೇರಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ಯಾಸ್‌ಪೈಪ್ ಲೈನ್ ಕಾಮಗಾರಿಯಿಂದ ಹಾಳಾಗಿರುವ ರಸ್ತೆ ಸರಿಪಡಿಸಲು ಸಂಬಂಧಿಸಿದವರು ಗಮನಹರಿಸಬೇಕು. ಜತೆಗೆ ಸುಗಮ ಸಂಚಾರಕ್ಕೆ ತೊಡಕಾಗಿರುವ ಎಲ್ಲ ಸಮಸ್ಯೆಗಳನ್ನು ಸಂಬಂಧಿಸಿದವರು ಬಗೆಹರಿಸಬೇಕು. ಶಶಿಕುಮಾರ್, ನಗರಸಭೆ ಮಾಜಿ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net