

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸರಿಯಾಗುತ್ತಿಲ್ಲ, ವೃದ್ಧರು-ಅಂಗವಿಕಲರನ್ನು ಕಡೆಗಣಿಸಲಾಗುತ್ತಿದೆ, ಪಂಚಾಯಿತಿ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಮೂಡಾ ನಿರ್ಮಿಸಿರುವ ಕೆರೆಯ ತಡೆಗೋಡೆ ಕಳಪೆ, ಕಸದ ಕೊಂಪೆಯಾಗಿದೆ ಜಗಜೀವನ್‌ರಾಮ್ ಉದ್ಯಾನವನ, ಡಂಪಿಂಗ್ ಯಾರ್ಡ್ ತ್ಯಾಜ್ಯ ನೀರು ಮಳೆ ನೀರು ತೋಡಿಗೆ, ಹೈವೇ ಅಧಿಕಾರಿಗಳಿಂದ ಗೂಡಂಗಡಿ ಮಾಲೀಕರಿಗೆ ನಿತ್ಯ ಕಿರುಕುಳ ಹೀಗೆ ಹತ್ತು ಹಲವು ದೂರುಗಳು ಬುಧವಾರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ಕೇಳಿಬಂದವು.
ಪ್ರತಿಪಕ್ಷ ಸದಸ್ಯ ಪುತ್ತುಬಾವ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸರಿಯಾಗಿ ಆಗುತ್ತಿಲ್ಲ. ಆಸ್ಪತ್ರೆ ಆವರಣದಲ್ಲಿ ಮರ ಬೀಳುವ ಸ್ಥಿತಿಯಲ್ಲಿದ್ದು ತೆರವುಗೊಳಿಸಿ ಎಂದು ವೈದ್ಯರಿಗೆ ಸೂಚನೆ ನೀಡಿದರು. ಪ.ಪಂ.ಸದಸ್ಯ ಮಂಜುನಾಥ ಕಂಬಾರ, ಸುಭಾಷ್ ಶೆಟ್ಟಿ ಧ್ವನಿಗೂಡಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ವೃದ್ಧರು, ಅಂಗವಿಕಲರನ್ನು ಕಡೆಗಣಿಸಲಾಗುತ್ತಿದೆ ಅವರಿಗೆ ಪ್ರಾಮುಖ್ಯತೆ ನೀಡಿ ಎಂದರು.
ಮೂಲ್ಕಿ ಠಾಣೆ ಎಎಸ್‌ಐ ಸಂಜೀವ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾದಲ್ಲಿ ಅಪರಾಧ ನಿಯಂತ್ರಣಕ್ಕೆ ಬಲ ಬರಲಿದೆ ಎಂದರು.
ಸೇವಾ ಸಂಸ್ಥೆಗಳ ಸಹಕಾರದಿಂದ ಈಗಾಗಲೇ ಕೆಲವು ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ನಿರ್ವಹಣೆ ಕೊರತೆಯಿಂದ ಮೂಲೆಗುಂಪಾಗಿದೆ, ಇದನ್ನು ಸರಿಪಡಿಸಬೇಕಾಗಿದೆ ಎಂದು ಸತೀಶ್ ಅಂಚನ್ ಹೇಳಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿ ಮಧುಕರ್ ಸೂಚನೆ ನೀಡಿದರು
ಪ.ಪಂ ಸದಸ್ಯ ಬಾಲಚಂದ್ರ ಕಾಮತ್ ಮಾತನಾಡಿ, ಜಿಲ್ಲಾಧಿಕಾರಿಪಟ್ಟಣ ಪಂಚಾಯಿತಿಗೆ ಬರುವಾಗ ನಮಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದಾಗ ಅಧ್ಯಕ್ಷ ಸತೀಶ್ ಅಂಚನ್,ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಡಿಸಿ ಆಗಮಿಸಿದ್ದರು ಎಂದು ಉತ್ತರಿಸಿದರು.
ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಬಿಜೆಪಿಯ ಹರ್ಷರಾಜ ಶೆಟ್ಟಿ, ವಂದನ ಕಾಮತ್, ಶಾಂತಾ ಕಿರೋಡಿಯನ್, ದಯಾವತಿ ಅಂಚನ್ ಹಾಗೂ ಕಾಂಗ್ರೆಸ್‌ನ ಬಾಲಚಂದ್ರ ಕಾಮತ್ ಸಂದೀಪ್ ಕುಮಾರ್ ಮುನ್ನಾ ಯಾನೆ ಮಹೇಶ್‌ರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆ ಲಕ್ಷ್ಮೀ ಹಾಗೂ ಸದಸ್ಯರು ಕಲಾಪದಲ್ಲಿ ಭಾಗಿಯಾದರು. ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಕಲಾಪ ನಿರ್ವಹಿಸಿ, ವಂದಿಸಿದರು.
ಮುಲ್ಕಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಹಾಗೂ ಸರ್ಕಾರದ ಮೂಲಕ ಮುಲ್ಕಿ ಪಟ್ಟಣ ಪಂಚಾಯತಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಲೋಕೇಶ್ ಕೋಟ್ಯಾನ್, ತಿಲಕ್ ಪೂಜಾರಿ, ಭೀಮಶಂಕರ್ ರವರನ್ನು ಗೌರವಿಸಲಾಯಿತು.