ಹಿರೀಸಾವೆ: ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಚನ್ನಿಗರಾಯಸ್ವಾಮಿ ದೇವಾಲಯದ ಉದ್ಘಾಟನೆ ಮೇ 19ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯೇ ದೇಗುಲಕ್ಕೆ ಹಸಿರು ಚಪ್ಪರ ಹಾಕಿ, ಬಾಳೆ ಕಂಬಗಳನ್ನು ಕಟ್ಟಿ, ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಭಾನುವಾರ ಬೆಳಗ್ಗೆ ಶಾಂತಿ ಮತ್ತು ಮಂಡಲ ಪೂಜೆ, ಕಳಸಾರಾಧನೆ, ಸುದರ್ಶನ, ನವಗ್ರಹ, ದೀಕ್ಷಾ, ಕಾಲ ಹೋಮಗಳು ನಡೆಯಲಿವೆ. ಬ್ರಾಹ್ಮಿ ಮುಹೂರ್ತದಲ್ಲಿ ಗೋಪುರಕ್ಕೆ ಕಲಶ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಕಳಾ ಹೋಮ, ಮಹಾಪೂರ್ಣಾಹುತಿ ನಡೆದು ನಂತರ ಕುಂಭಾಭಿಷೇಕ ಜರುಗಲಿದೆ.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಜಿಕೆವಿಕೆ ನಿವೃತ್ತ ಅಧಿಕಾರಿ ದೇವರಾಜು, ಗುತ್ತಿಗೆದಾರ ರಂಗೇಗೌಡ, ನಿವೃತ್ತ ಶಿಕ್ಷಕ ನಾಗರಾಜಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.