ಚನ್ನಿ ಮಾದಿ ಹಳ್ಳಿ ಈಗ ಚನ್ನಮಾನಹಳ್ಳಿ

Kailancha-Ph-003-Gramayana Channamanahalli - Story -Photo Kere-2-6-2024
Published on

* ಅಕ್ಕ ತಂಗಿಯರು ಕಟ್ಟಿಸಿದ ಕೆರೆ ಇಂದು ಗ್ರಾಮದ ನೀರಿನ ಕಾಮಧೇನು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಪಾಳೇಗಾರರ ಆಳ್ವಿಕೆ ಹೊಂದಿ ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಬ್ರಾಹ್ಮಣರ ಅಗ್ರಹಾರವಾಗಿ ಚನ್ನಿ ಮಾದಿ ಎಂಬ ಇಬ್ಬರು ಅಕ್ಕತಂಗಿಯರು ಕಟ್ಟಿಸಿದ ಕೆರೆ ಇಂದು ಗ್ರಾಮದ ಜನರ ಜೀವಜಲ. ಒಂದು ಕೆರೆಯ ಮೇಲ್ಬಾಗ ಸುಂದರ ಪ್ರಕೃತಿಯಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತ ಗ್ರಾಮವೇ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಮಾನಹಳ್ಳಿ.

ಚನ್ನಮಾನಹಳ್ಳಿ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಹೆಸರುವಾಗಿಯಾಗಿದೆ. ಜಿಲ್ಲಾ ಕೇಂದ್ರದಿಂದ 2 ಕಿ.ಮೀ. ಅಂತರದ ಕೂಗಳತೆ ದೂರದಲ್ಲಿದ್ದು, ಸುತ್ತಲೂ ಭತ್ತ, ತೆಂಗು, ಹಸಿರು ಸಿರಿಯಲ್ಲಿ ಕೆರೆಯ ಮೇಲ್ಬಾಗ ದೇವಾಲಯಗಳ ಮಧ್ಯೆ ಪ್ರಕೃತಿ ವನಸಿರಿ ಮಧ್ಯೆ ಸದಾ ಹಸಿರನ್ನೇ ಹಾಸು ಹೊದ್ದು ತನ್ನದೇ ಆದ ಮೂಲ ಇತಿಹಾಸ ಹೊಂದಿರುವ ಗ್ರಾಮದಲ್ಲಿ ಎಲ್ಲ ವರ್ಗದ ಜನರು ಸೌಹಾರ್ದದಿಂದ ಬದುಕು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ. ಪುರಾತನ ಕಾಲದ ಆಂಜನೇಯ, ಕಮಲೇಶ್ವರ ದೇವಾಲಯ ನೂರಾರು ವರ್ಷಗಳ ಅರಳೀಮರ ಗ್ರಾಮದಲ್ಲಿದೆ.

ಇತಿಹಾಸ :

ಹಿಂದೆ ಈ ಗ್ರಾಮವನ್ನು ಪಾಳೆಗಾರರು ತಮ್ಮ ಆಳ್ವಿಕೆಯ ಕೇಂದ್ರವಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರಂತೆ. ರಾಜ ಮಹಾರಾಜರ ಕಾಲದಲ್ಲಿ ಗ್ರಾಮ ಬ್ರಾಹ್ಮಣರ ಅಗ್ರಹಾರವಾಗಿ ರಾಮಲಿಂಗಾಭಟ್ಟ ಎಂಬುವರ ತಂಡ ಇಲ್ಲಿತ್ತಂತೆ.

ಕೆರೆ ನಿರ್ಮಾಣ

ಬರಗಾಲದಲ್ಲಿ ಕುಡಿಯುವ ನೀರಿಗಾಗಿ ಗ್ರಾಮದ ಮಹಿಳೆಯರು ಪರಿಪಾಟಲು ಪಡುತ್ತಿದ್ದಾಗ ಚನ್ನಿ ಮಾದಿ ಎಂಬ ಅಕ್ಕತಂಗಿಯರು ಗ್ರಾಮದ ಮೇಲುಸ್ತುವಾರಿ ನೋಡಿಕೊಂಡು ಗ್ರಾಮದ ಯಜಮಾನರಂತೆ ಎಲ್ಲ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಅಂತಹ ಸಮಯದಲ್ಲಿ ಜನರಿಗೆ ನೀರಿನ ಬವಣೆ ತಪ್ಪಿಸಲು ಸುಮಾರು 37 ಎಕರೆ ವಿಸ್ತಾರದಲ್ಲಿ ಬೃಹತ್ ಕೆರೆ ಕಟ್ಟಿಸಿ ಜೀವಂತ ನದಿಯಾಗಿ ಗ್ರಾಮದ ಕೆರೆಯನ್ನು ನಿರ್ಮಿಸಿ, ಕೃಷಿಗೆ ಉತ್ತೇಜನ ನೀಡಿದರು. ಈಗಲೂ ಕೆರೆ ಎಂತಹ ಬರಗಾಲದಲ್ಲೂ ಬತ್ತಿದ ಉದಾಹರಣೆ ಇಲ್ಲ. ಈಗಲೂ ಕೆರೆಯ ಹೆಸರನ್ನು ಚನ್ನಮ್ಮ ಮಾದಮ್ಮ ಕೆರೆ ಎಂತಲೇ ಗ್ರಾಮದ ಜನ ಕರೆಯುತ್ತಾರೆ.

ಚನ್ನಮಾನಹಳ್ಳಿ ಆದ ಕಥೆ :

ಚನ್ನಿ ಮಾದಿ ಅಕ್ಕತಂಗಿಯರ ಹಿಡಿತದಲ್ಲಿದ್ದ ಗ್ರಾಮ ಇದಾಗಿದ್ದರಿಂದ ಮೊದಲು ಚನ್ನಿ ಮಾದಿ ಹಳ್ಳಿ ಎಂತಲೇ ಕರೆಯಲ್ಪಟ್ಟಿತು. ನಂತರ ಚನ್ನಮಾಡಿಹಳ್ಳಿ ಎಂಬ ಹೆಸರಿನಲ್ಲಿ ಕರೆಯುತ್ತಿದ್ದ ಗ್ರಾಮ ಕಾಲಾಂತರದಲ್ಲಿ ಚನ್ನಮಾನಹಳ್ಳಿ ಆಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ದೇವಾಲಯಗಳು 

ಗ್ರಾಮದಲ್ಲಿ ಹೊಯ್ಸಳರ ಕಾಲದ ಏಕಶಿಲೆಯಿಂದ ಕೆತ್ತಿದ ಆಂಜನೇಯ ಮೂರ್ತಿಯ ದೇವಾಲಯ, ಚೋಳರ ಕಾಲದ ಕಮಲೇಶ್ವರ ದೇವಾಲಯ, ಮಾರಮ್ಮ, ಮುತ್ತಲಮ್ಮ, ಶ್ರೀರಾಮ, ಶನೈಶ್ಚರ, ಸಿದ್ದರಾಮೇಶ್ವರ, ಮಾಸ್ತಮ್ಮ ದೇಗುಲಗಳಿವೆ. ಜತೆಗೆ ಸಾವಿರ ವರ್ಷಕ್ಕೂ ಮಿಗಿಲಾದ ಪುರಾತನ ಅರಳೀಮರವಿದೆ.

ಶಾಸನಗಳು 

ಗ್ರಾಮದಲ್ಲಿ ಅಗ್ರಹಾರಕ್ಕೆ ಪುರಾವೆಗಳು, ಪಾಳೇಗಾರರ ಆಡಳಿತ ಕೇಂದ್ರದ ಪುರಾವೆಗಳನ್ನು ಗ್ರಾಮದಲ್ಲಿ ಇರುವ ಶಾಸನಗಳೇ ನೀಡುತ್ತವೆ. ವಿಜಯನಗರದ ಆಡಳಿತದ ಶಾಸನ ಕೂಡ ಗ್ರಾಮದಲ್ಲಿತ್ತು ಎನ್ನಲಾಗಿದೆ. ಹೊಯ್ಸಳರ ಕಾಲದ ಬಿಟ್ಟಿದೇವನ ಶಾಸನ, ನಂದಿನಾಥ ಎಂಬುವನು ಬರೆಸಿರುವ ಶಾಸನಗಳು ಗ್ರಾಮದ ಇತಿಹಾಸವನ್ನು ಹೇಳುತ್ತವೆ.

ಭತ್ತದ ಕಣಜ :

ಗ್ರಾಮದಲ್ಲಿ ಕೃಷಿಕರೇ ಹೆಚ್ಚಿದ್ದು, ಗ್ರಾಮದ ಪಕ್ಕವೇ ಬೃಹತ್ ಕೆರೆ ಇರುವ ಕಾರಣ ಪ್ರಮುಖವಾಗಿ ಭತ್ತ ಬೆಳೆಯುವ ರೈತರು ಗ್ರಾಮದಲ್ಲಿದ್ದಾರೆ. ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸುವ ಕೆರೆ ಗ್ರಾಮದ ರೈತರ ನೀರಿನ ಬವಣೆ ನೀಗಿಸಿ ಪ್ರಸ್ತುತ ಬೋರ್‌ವೆಲ್‌ಗಳಿಗೆ, ಅಂತರ್ಜಲಕ್ಕೆ ಪೂರಕವಾಗಿದೆ. ತೆಂಗು, ಮಾವು, ರೇಷ್ಮೆ ಗ್ರಾಮದ ರೈತರ ಪ್ರಮುಖ ಕೃಷಿಯಾಗಿದೆ.

ಅರಳೀಮರವೇ ದೇವಾಲಯ :

ಗ್ರಾಮದಲ್ಲಿ ಇತಿಹಾಸ ಕಾಲದ ಅರಳೀಮರವಿದ್ದು, ಬೇವಿನ ಮರವೂ ಜತೆಯಲ್ಲೇ ಬೆಳೆದಿದೆ. ಜತೆಗೆ ನಾಗದೇವರ ಸೆಡೆ ಆಕಾರ, ಗಣೇಶನ ಆಕಾರ ಕೂಡ ಮರದ ಬುಡದಲ್ಲಿವೆ. ಅಲ್ಲದೆ ಗ್ರಾಮ ದೇವತೆ ಪಟ್ಟಲದಮ್ಮ ದೇಗುಲ ಕೂಡ ಮರದ ಕೆಳಗೆ ಇದ್ದು, ಅದಕ್ಕೆ ಅರಳೀಬೇವಿನಮರವೇ ದೇವಾಲಯವಾಗಿದೆ.
ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆ ಪಡೆದ ಗ್ರಾಮವಾಗಿದೆ ಎನ್ನುವುದಕ್ಕೆ ದೇವಾಲಯಗಳೇ ಸಾಕ್ಷಿಯಾಗಿವೆ. ಅಂದಿನಿಂದಲೂ ಗ್ರಾಮಕ್ಕೆ ಉತ್ತಮ ಹೆಸರಿದೆ. ಚನ್ನಿ ಮಾದಿ ಎಂಬ ಅಕ್ಕತಂಗಿಯರಿಂದ ನಿರ್ಮಾಣವಾದ ಕೆರೆ ಗ್ರಾಮದ ಕಲ್ಪವೃಕ್ಷವಾಗಿದೆ. ಇಂತಹ ಗ್ರಾಮದಲ್ಲಿ ಜನ್ಮ ತಾಳಿರುವುದೇ ನಮ್ಮ ಪುಣ್ಯ. ಮಲ್ಲೇಶ್, ಸಾಹಿತಿ, ಚನ್ನಮಾನಹಳ್ಳಿ
ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ವಿಸ್ತಾರದ ಶಾಲಾ ಆಟದ ಮೈದಾನ, ಉತ್ತಮ ಕಟ್ಟಡ, ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಶಾಲೆ ನಮ್ಮ ಗ್ರಾಮದ್ದಾಗಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದರೂ ಗ್ರಾಮೀಣ ಸೊಗಡು ಬಿಟ್ಟುಕೊಟ್ಟಿಲ್ಲ. ನೂರಾರು ವರ್ಷಗಳ ಭವ್ಯ ಇತಿಹಾಸ ಗ್ರಾಮಕ್ಕಿದೆ. ಗ್ರಾಪಂ ಕಾಲಕಾಲಕ್ಕೆ ಮೂಲ ಸೌಕರ್ಯ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗುತ್ತಿದೆ. ಇಂತಹ ಗ್ರಾಮದಲ್ಲಿ ಜನಿಸಿರುವ ನಾವೇ ಭಾಗ್ಯಶಾಲಿಗಳು. ಅರ್ಕೇಶ್, ಚನ್ನಮಾನಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net