ಚನ್ನರಾಯಪಟ್ಟಣ ಬಂದ್ ಯಶಸ್ವಿ

ಫೋಟೋ ಶೀರ್ಷಿಕೆ 29 ಸಿಆರ್_ಪಿ-2 ಬಿ.
ಚನ್ನರಾಯಪಟ್ಟಣದಲ್ಲಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ರೈತಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘಗಳು ಕಾವೇರಿ ನ್ಯಾಯಾಧಿಕರಣ ಮತ್ತು ರಾಜ್ಯಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
Published on

ಚನ್ನರಾಯಪಟ್ಟಣ: ಕಾವೇರಿಗಾಗಿ ಉಳಿವಿಗಾಗಿ ಶುಕ್ರವಾರ ರಾಜ್ಯಾದ್ಯಂತ ಕನ್ನಡಪರ ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಚನ್ನರಾಯಪಟ್ಟಣಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 6 ಘಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಕನ್ನಡಪರ, ರೈತಪರ ಸಂಘಟನೆಗಳ ಪದಾಧಿಕಾರಿಗಳು, ಮುಂಜಾನೆಯೇ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಬಾಗಿಲು ಮುಚ್ಚಿಸುವ ಕೆಲಸ ಮಾಡಿದರು. ಬೆಳಗ್ಗೆ 9 ಗಂಟೆಗೆ ಆಡಳಿತ ಸೌಧದ ಮುಂಭಾಗ ಜಮಾಯಿಸಿದ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವ ಕಾವೇರಿ ನ್ಯಾಯಾಧಿಕರಣದ ವಿರುದ್ಧ, ಮಧ್ಯಸ್ಥಿಕೆ ವಹಿಸದ ಕೇಂದ್ರ ಸರ್ಕಾರ, ರಾಜ್ಯ ಪರ ಧ್ವನಿ ಎತ್ತದ ಸಂಸದರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಿ.ಎಂ. ರಸ್ತೆಯಿಂದ ಮೆರವಣಿಗೆ ಹೊರಟು, ಹೊಸ ಬಸ್ ನಿಲ್ದಾಣದವರೆಗೂ ಸಾಗಿ ನಂತರ ನವೋದಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಮೈಸೂರು ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಆಸ್ಪತ್ರೆ ವೃತ್ತದ ಮೂಲಕ ಕೆ.ಆರ್. ವೃತ್ತಕ್ಕೆ ತಲುಪಿ ಭುವನೇಶ್ವರಿ ಮತ್ತು ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಪ್ರತಿಭಟನೆಯ ನಂತರ ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರೈತ ಸಂಘ, ದಲಿತ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್, ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಂಘ, ಸಮರಸೇನೆ, ಕೆಂಪೇಗೌಡ ವೇದಿಕೆ, ಭೂಮಿ ಕ್ಷೇಮಾಭೀವೃದ್ಧಿ ಸಂಘ, ಮಸಾಪ, ತಾ.ವೈದ್ಯರ ಸಂಘ, ಕಾರ್ಮೀಕರ ಸಂಘ, ವರ್ತಕರ ಸಂಘ,ಆಟೋ ಹಾಗೂ ಕಾರು ಚಾಲಕರ ಸಂಘ, ರಸ್ತೆ ಬದಿ ವ್ಯಾಪಾರಿಗಳು, ತಕರಾರಿ ವ್ಯಾಪಾರಸ್ಥರು, ಹೋಟಲ್ ಮಾಲೀಕರ ಸಂಘ ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net