

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದ ಕುವೆಂಪುನಗರ ಎರಡನೇ ಅಡ್ಡರಸ್ತೆಯಲ್ಲಿನ ಗಲ್ಲಿಯೊಂದು ತ್ಯಾಜ್ಯ ವಿಲೇವಾರಿ ತಾಣವಾಗಿದ್ದು, ಈ ಗಲ್ಲಿಯಲ್ಲಿ ಕಸದ ರಾಶಿ ತುಂಬಿದ್ದು ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡಿದೆ.
ನಗರದ ಬೆಂಗಳೂರು - ಮೈಸೂರು ರಸ್ತೆಯಲ್ಲಿರುವ ಪುಣ್ಯ ಆಸ್ಪತ್ರೆ ಎದುರು ಎರಡು ಮತ್ತು ಮೂರನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆಯಿದೆ. ಇಲ್ಲಿ ಸಿಮೆಂಟ್ ರಸ್ತೆಯಿದ್ದು, ಈಗ ತ್ಯಾಜ್ಯ ವಿಲೇವಾರಿಯ ಹಾಟ್‌ಸ್ಪಾಟ್ ಆಗಿದೆ. ಈ ರಸ್ತೆಯಲ್ಲಿ ಓಡಾಡುವುದು ಇರಲಿ, ತಿರುಗಿ ನೋಡಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹಸಿ ಹಾಗೂ ಒಣಕಸ ಯಥೇಚ್ಛವಾಗಿ ಬಿದ್ದಿದೆ. ಈ ರಸ್ತೆಯ ಚರಂಡಿಯೂ ತ್ಯಾಜ್ಯದಿಂದ ತುಂಬಿಹೋಗಿದೆ. ಹೆದ್ದಾರಿ ಸೇರಿ ಈ ಭಾಗದ ತ್ಯಾಜ್ಯ ಈ ರಸ್ತೆ ಸೇರುತ್ತಿದೆ. ಜತೆಗೆ ತ್ಯಾಜ್ಯ ತಿನ್ನಲು ಹಂದಿ, ನಾಯಿ, ಬೀಡಾಡಿ ದನಗಳು ಗುಂಪಾಗಿ ಈ ಗಲ್ಲಿಯನ್ನು ಅಡ್ಡಾ ಮಾಡಿಕೊಂಡಿವೆ. ಈ ಗಲ್ಲಿ ರಸ್ತೆ ಮಾತ್ರವಲ್ಲದೆ ಪಕ್ಕದಲ್ಲೇ ಇರುವ ಖಾಲಿ ನಿವೇಶನದಲ್ಲೂ ಕಸ ಸುರಿಯಲಾಗುತ್ತಿದೆ. ಜತೆಗೆ ಇಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಜತೆಗೆ ಗಾಳಿ ಬೀಸಿದಾಗ ಕಸ ಅಕ್ಕಪಕ್ಕದ ರಸ್ತೆಗಳಿಗೂ ತೂರಿ ಬರುತ್ತಿದೆ. ಸಾರ್ವಜನಿಕರು ನಗರಸಭೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆಸ್ಪತ್ರೆ ತ್ಯಾಜ್ಯ ಸುಡುವ ದೂರು?
ಗಲ್ಲಿ ರಸ್ತೆ ಪಕ್ಕವಿರುವ ಖಾಲಿ ನಿವೇಶನದಲ್ಲಿ ಖಾಸಗಿ ಆಸ್ಪತ್ರೆ ತ್ಯಾಜ್ಯ ಸುರಿದು ಬೆಂಕಿ ಹಚ್ಚುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಇದರಿಂದ ವಿಷಪೂರಿತ ಹೊಗೆ ಆವರಿಸುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಅನಾರೋಗ್ಯದ ಭೀತಿ ಶುರುವಾಗಿದೆ.
ಎಲ್ಲ ಗಲ್ಲಿಗಳ ಕಥೆಯೂ ಇದೆ!
ಕುವೆಂಪು ನಗರದ ಪ್ರತಿ ಅಡ್ಡರಸ್ತೆಯಲ್ಲೂ ಗಲ್ಲಿಗಳಿದ್ದು, ಈ ಗಲ್ಲಿಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಬಹುತೇಕ ಗಲ್ಲಿ ರಸ್ತೆಗಳು ಕಸದ ಸುರಿಯುವ ೇವರಿಟ್ ಜಾಗಗಳಾಗಿವೆ. ಇನ್ನು ಹಲವು ಗಲ್ಲಿಗಳು ಒತ್ತುವರಿಯಾಗಿ ಮಾಯವಾಗಿವೆ. ಈ ಗಲ್ಲಿಗಳ ಅಭಿವೃದ್ಧಿಗೆ ತೋರಿಸಿದ ಕಾಳಜಿ, ಗಲ್ಲಿಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟವರು ನೀಡುತ್ತಿಲ್ಲ ಎಂಬ ಆರೋಪಗಳು ನಾಗರಿಕರದ್ದಾಗಿದೆ.
ಇನ್ನಾದರೂ ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ನಗರವಾಸಿಗಳ ಸಂಪರ್ಕ ಸಾಧನವಾಗಬಹುದಾದ ಗಲ್ಲಿ ರಸ್ತೆಗಳನ್ನು ರಕ್ಷಿಸಲು ಕಾಳಜಿ ತೋರಲಿ ಎಂಬುದು ಪತ್ರಿಕೆಯ ಆಶಯವಾಗಿದೆ.