

ತುಮಕೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಚರ್ಚೆ ನಡೆಸಿ ತೀಮಾರ್ನ ಕೈಗೊಂಡು ಒಮ್ಮತದ ಎನ್ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಒಂದೇ ಕ್ಷೇತ್ರದ ಉಪಚುನಾವಣೆ ನಡೆಯುತ್ತಿಲ್ಲ. ಸಂಡೂರು, ಶಿಗ್ಗಾವಿ ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿದ್ದು ಉಭಯ ಪಕ್ಷದ ನಾಯಕರುಗಳು ಕುಳಿತು ಚರ್ಚೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಕುರಿತು ಬಿಜೆಪಿ ಕೇಂದ್ರ , ರಾಜ್ಯ ನಾಯಕರು, ಜೆಡಿಎಸ್ ವರಿಷ್ಠರ ತೀರ್ಮಾನವೇ ಅಂತಿಮ. ಜೆಡಿಎಸ್ ಅಥವಾ ಬಿಜೆಪಿ ಅಭ್ಯರ್ಥಿ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಅಂತಿಮವಾಗಿ ಯಾರಾದರೂ ಆಗಲಿ ಎನ್ಡಿಎ ಅಭ್ಯರ್ಥಿ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ರಾಜ್ಯದ ಜನತೆ ಜೆಡಿಎಸ್ , ಬಿಜೆಪಿಯ ಸಮ್ಮಿಲನವನ್ನು ಒಪ್ಪಿದ್ದಾರೆ. 28 ಲೋಕಸಭಾ ಕ್ಷೇತ್ರಗಳಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಜನತೆ ಕೊಡುಗೆ ನೀಡಿದ್ದಾರೆ. ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ. ಸೋಮಣ್ಣ ಗೆದ್ದು ಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿಯನ್ನು ಜನತೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಸ್ಥಳಿಯ ಸಂಸ್ಥೆ ಚುನಾವಣೆ, ವಿಧಾನಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚಿತ್ರನಟ ದರ್ಶನ್ ವಿಚಾರದಲ್ಲಿ ಕಾನೂನಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಕಾನೂನಿಗೆ ತಲೆಬಾಗಬೇಕು. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.
ನಿಖಿಲ್ ಕುಮಾರಸ್ವಾಮಿ
ಅಧ್ಯಕ್ಷ, ರಾಜ್ಯ ಜೆಡಿಎಸ್ ಯುವಟಕ