

ಚನ್ನಪಟ್ಟಣ: ಚನ್ನಪಟ್ಟಣ, ರಾಮನಗರ ಎರಡೂ ಪಟ್ಟಣಗಳನ್ನು ಅವಳಿ ನಗರ ಮಾಡಿ, ಹುಬ್ಬಳ್ಳಿ, ಧಾರವಾಡ ರೀತಿ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಕನಸು ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬೃಹತ್ ರೇಷ್ಮೆ ಮಾರುಕಟ್ಟೆ ಆಗುತ್ತಿದೆ. ಇದರೊಂದಿಗೆ, ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ, ಕಾಂಗ್ರೆಸ್‌ನವರು ಕುಮಾರಸ್ವಾಮಿ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆ ಅಪಪ್ರಚಾರಗಳಿಗೆ ನೀವುಗಳೇ ಉತ್ತರ ನೀಡಿ ಎಂದು ಕರೆನೀಡಿದರು.
ಚನ್ನಪಟ್ಟಣ ಕ್ಷೇತ್ರ ಉಸಿರಿನಲ್ಲಿ ಬೆರೆತಿದೆ. ಈ ಕ್ಷೇತ್ರ ಹಿಂದಿನಿಂದಲೂ ನಮ್ಮ ಕುಟುಂಬಕ್ಕೆ ನೀಡಿರುವ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಏಕಾಂಗಿಯಾಗಿ ಪಕ್ಷ ಕಟ್ಟುತ್ತಿದ್ದೇನೆ. ಇದಕ್ಕೆ ನೀವು ಕೊಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಶಕ್ತಿ ಕಾರಣ ಎಂದರು.
ನಾನು ಎರಡು ಚುನಾವಣೆಗಳಲ್ಲೂ ಒಂದೂ ಗ್ರಾಮಕ್ಕೂ ಪ್ರಚಾರಕ್ಕೆ ಬರಲಿಲ್ಲ. ಆದರೂ, ನೀವು ಎರಡು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ನಾನು ನಿಮ್ಮ ಕಷ್ಟ ಕೇಳಿ ಕೆಲಸ ಮಾಡಿದ್ದೇನೆ. ಬೇರೆ ರಾಜಕಾರಣಿಗಳ ಜತೆ ನನ್ನನ್ನು ಹೋಲಿಸಲು ಸಾಧ್ಯವಿಲ್ಲ. ದೇವೇಗೌಡರು ರೈತರ ಪರವಾಗಿ ಹೋರಾಟ ಮಾಡಿದವರು, ದೇವೇಗೌಡರ ಹೋರಾಟಕ್ಕೆ ಚನ್ನಪಟ್ಟಣ ರೈತರು ಬೆಂಬಲ ನೀಡಿದ್ದರು. ಈ ಹಿಂದೆ ತಾಲೂಕಿನ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ಆಯ್ತು, ಆಗ ಇಬ್ಬರು ರೈತರು ಬಲಿಯಾದರು. ಆಗ ದೇವೇಗೌಡರು ಬಂದು ಪಾದಯಾತ್ರೆ ಮಾಡಿ ಅವರಿಗೆ ಪರಿಹಾರ ಕೊಡಿಸಿದ್ದರು. ಆದರೆ, ಈಗ ಕ್ಷೇತ್ರಕ್ಕೆ ಬಂದು ಓಡಾಡುತ್ತಿರುವ ಅಣ್ಣತಮ್ಮಂದಿರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಈಗ ಬಂದು ಹಾಲು ಉತ್ಪಾದಕರ ಸಂಘದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನೆಮ್ಮದಿಯಿಂದ ರೈತರು ಹಾಲು ಹಾಕಲು ಬಿಡುತ್ತಿಲ್ಲ. ಹಾಲಿನ ಪ್ರೋತ್ಸಾಹ ಧನವನ್ನು ಐದು ತಿಂಗಳಿನಿಂದ ಕೊಟ್ಟಿಲ್ಲ ಎಂದರು.
ಕಾಂಗ್ರೆಸ್ ಕೊಡುಗೆ ಶೂನ್ಯ
ಚನ್ನಪಟ್ಟಣಕ್ಕೆ ಈಗ ಬಂದು ಅಭಿವೃದ್ಧಿ ಮಾಡುತ್ತೇವೆ ಎನ್ನುವ ಕೈ ನಾಯಕರು, ದೇವಸ್ಥಾನಕ್ಕೆ 10 ಕೋಟಿ ರೂ. ಕೊಟ್ಟಿದ್ದೀನಿ ಎನ್ನುತ್ತಾರೆ. ಆದರೆ, ಆ ಅನುದಾನ ಮೊದಲೇ ಬಂದಿತ್ತು. ಅನುದಾನ ತಡೆದಿದ್ದೀರಿ ಎಂದು ನಾನೇ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದೇನೆ. ಅದಕ್ಕೆ ಸಚಿವರು ಈ ಕೂಡಲೇ ಬಿಡುಗಡೆ ಮಾಡುತ್ತೇನೆ ಎಂದು ಪತ್ರ ಬರೆದಿದ್ದರು. ಅವತ್ತು ನಾನು ಬಿಡುಗಡೆ ಮಾಡಿಸಿದ್ದನ್ನು ಕಾಂಗ್ರೆಸ್‌ನವರು ನಮ್ಮದು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಯಾವ ಊರಿಗೆ ಎಷ್ಟೆಷ್ಟು ಕೊಡಬೇಕು ಎಂದು 183 ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ಭಾಷಣದ ನಡುವೆ ದಾಖಲೆ ಪ್ರದರ್ಶಿಸಿದರು.
ಚುನಾವಣೆ ಘೋಷಣೆಯಾಗುತ್ತದೆ ಎಂದು ತರಾತುರಿಯಲ್ಲಿ ಪೂಜೆ ಮಾಡೋಕೆ ಬಂದಿದ್ದಾರೆ. ನಮ್ಮ ಕಾರ್ಪೋರೇಟರ್‌ಗಳನ್ನು ಖರೀದಿಸಿದ್ದಾರೆ. ನಾನು ಬಿಡುಗಡೆ ಮಾಡಿಸಿರೋ ಹಣವನ್ನು ಇದೀಗ ವಾರ್ಡ್‌ಗಳಿಗೆ ಹಂಚಿಕೆ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.
ಮುಸ್ಲಿಮರು ಅರ್ಥ ಮಾಡಿಕೊಳ್ಳಿ
ಮಂಡ್ಯದ ನಾಗಮಂಗಲದಲ್ಲಿ ಇತ್ತೀಚೆಗೆ ನಡೆದ ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ಹೆಚ್ಚು ಜನರ ಅಂಗಡಿಗಳು ಸುಟ್ಟು ಹೋದವು. ನಾನು ಪರಿಶೀಲಿಸಿ ಪರಿಹಾರ ಕೊಟ್ಟೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದ ಎಚ್‌ಡಿಕೆ, ಡಾ.ಮಂಜುನಾಥ್ ಅವರಿಗೆ ನಿಮ್ಮ ವಾರ್ಡ್‌ನಲ್ಲಿ ಎಷ್ಟು ಓಟ್ ಕೊಟ್ಟಿದ್ದೀರಿ ಎಂಬುದನ್ನು ನೋಡಿದ್ದೇನೆ. ನಾಗಮಂಗಲದ ಪ್ರಕರಣದಲ್ಲಿ ಜೈಲಲ್ಲಿ 53 ಜನ ಇದ್ದರು, ಅದರಲ್ಲಿ ಮುಸಲ್ಮಾನರೇ ಹೆಚ್ಚಿದ್ದರು. ಆದರೂ, ನಾನು ನಮ್ಮ ಲೀಡರ್‌ಗಳಿಗೆ ಹೇಳಿ ಎಲ್ಲರನ್ನೂ ಬಿಡಿಸಿದ್ದೇನೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಇನ್ನೂ ಹಲವು ಜನ ಜೈಲಲಿದ್ದಾರೆ. ಕಾಂಗ್ರೆಸ್ ಮಹಾನುಭಾವರು ಅವರನ್ನು ಬಿಡಿಸಿದ್ದಾರಾ ಎಂದು ಎಚ್‌ಡಿಕೆ ಪ್ರಶ್ನಿಸಿದರು.
ಭಾವನಾತ್ಮಕ ಭಾಷಣ!
ಇಲ್ಲಿ ಯಾರೇ ಅಭ್ಯರ್ಥಿ ಆದರೂ ಅವರನ್ನು ಗೆಲ್ಲಿಸಿಕೊಡುವ ಮಾತು ಕೊಡಿ. ನಿಮಗೆ ನಾನು ಎಂದಿಗೂ ದ್ರೋಹ ಮಾಡಲ್ಲ, ನನ್ನನ್ನು ನಂಬಿ. ನನಗೆ ಮೂರು ಬಾರಿ ಆಪರೇಷನ್ ಆಗಿದೆ. ಆದರೆ, ನಿಮ್ಮ ಸೇವೆ ಮಾಡಲು ನಾನು ರಾಜಕೀಯದಲ್ಲಿ ಉಳಿದಿದ್ದೇನೆ. ದಯಮಾಡಿ ಕಾಂಗ್ರೆಸ್‌ನವರ ಅಪಪ್ರಚಾರ ನಂಬಬೇಡಿ. ನನಗೆ ದೆಹಲಿ ಮಟ್ಟದಲ್ಲಿ ಗೌರವ ಸಿಗುತ್ತಿದೆ ಎಂದರೆ ಅದಕ್ಕೆ ಚನ್ನಪಟ್ಟಣ ಕಾರಣ. ದಯಮಾಡಿ ದರೋಡೆ ಮಾಡುವವರ ಮಾತು ಕೇಳಬೇಡಿ. ಈ ಚುನಾವಣೆಯಲ್ಲಿ ಎಚ್ಚರಿಕೆಯಿಂದ ತೀರ್ಮಾನ ಮಾಡಿ ಎಂದು ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
ಅಭ್ಯರ್ಥಿಯ ಚಿಂತೆಬೇಡ!
ಈ ಚುನಾವಣೆಯಲ್ಲಿ ಅಭ್ಯರ್ಥಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ದಯಮಾಡಿ ನಾನು ತೀರ್ಮಾನ ಮಾಡಿದವರಿಗೆ ಬೆಂಬಲ ಕೊಡಿ. ದೇವೇಗೌಡರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ನಿಮ್ಮ ಋಣ ತೀರಿಸದೆ ನಾನು ಮಣ್ಣಿಗೆ ಹೋಗಲ್ಲ, ಅಲ್ಲಿಯವರೆಗೂ ನನ್ನ ಜೀವ ಹೋಗಲ್ಲ ಎಂದು ಎಚ್‌ಡಿಕೆ ಹೇಳಿದರು.
ಪಕ್ಕದ ಮಾಗಡಿಯ ಬಾಲಕೃಷ್ಣ, ಎಚ್.ಎಂ.ರೇವಣ್ಣ ಎಲ್ಲ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ಕುಮಾರಸ್ವಾಮಿ ಏನು ಮಾಡಿದ್ದಾನೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿಗೆ, ದೇವೇಗೌಡರರಿಗೆ ಐದುವರ್ಷ ಸಿಎಂ ಆಗಿ, ಪ್ರಧಾನಿ ಆಗಿ ಅವಕಾಶ ಸಿಕ್ಕಿದರೆ ಈ ರಾಜ್ಯದ ಚಿತ್ರಣವೇ ಬೇರೆ ಆಗಿರುತಿತ್ತು. ಈಗ ನಮ್ಮನ್ನು ಮುಗಿಸ್ತೀವಿ ಅಂತ ನಿಂತಿದ್ದಾರೆ. ನಿಮ್ಮ ಆಶೀರ್ವಾದ ಇರೋ ವರೆಗೂ ನಮ್ಮನ್ನು ಯಾರೂ ಮುಗಿಸಲು ಆಗಲ್ಲ ಎಂದರು.
ಡಿಸಿಎಂಗೆ ನಿಖಿಲ್ ಟಾಂಗ್!
ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ಅಭಿವೃದ್ಧಿಯಲ್ಲಿ ಕುಮಾರಸ್ವಾಮಿ ಅವರ ಕೊಡುಗೆಯನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಣ್ಣ ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗಲು ಚನ್ನಪಟ್ಟಣದ ಮಹಾ ಜನತೆ ಕಾರಣ. ಈ ಕ್ಷೇತ್ರದ ಜನರ ಋಣ ತೀರಿಸಲು ಅಧಿಕಾರಾವಧಿಯಲ್ಲಿ ತಾಲೂಕಿಗೆ ಒಂದೂವರೆ ಸಾವಿರ ಕೋಟಿ ರೂ. ಅನುದಾನ ತಂದಿದ್ದರು. ಇದನ್ನು ಯಾರೂ ತಿರುಚಲು ಸಾಧ್ಯವಿಲ್ಲ ಎಂದರು.
ರಾಜ್ಯದ ಉಪಮುಖ್ಯಮಂತ್ರಿಗಳಿಗೆ ಚನ್ನಪಟ್ಟಣ ತಾಲೂಕು ಗೊತ್ತಿರಲಿಲ್ಲ. ಈಗ ಉಪಚುನಾವಣೆ ಇರುವುದರಿಂದ ಅವರ ಈ ಕ್ಷೇತ್ರ ನೆನಪಾಗಿದೆ. ಚನ್ನಪಟ್ಟಣದಲ್ಲಿ ಡಿಸಿಎಂ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಏನೋ ಮಹಾ ಅನುದಾನ ತಂದಿದ್ದೀವಿ ಅಂತ ದೊಡ್ಡದೊಡ್ಡ ್ಲೆಕ್ಸ್ ಹಾಕಿಸ್ತಿದ್ದಾರೆ. ಆದರೆ, ಕುಮಾರಸ್ವಾಮಿ ತಂದ 1500 ಕೋಟಿ ರೂ. ಅನುದಾನದ ಬಗ್ಗೆ ಯಾವತ್ತು ಜಾಹೀರಾತು ಕೊಟ್ಟಿರಲಿಲ್ಲ. ಪಾಪ ಈಗ ಉಪಮುಖ್ಯಮಂತ್ರಿಗಳಿಗೆ ಚನ್ನಪಟ್ಟಣದ ಮೇಲೆ ಮಮಕಾರ ಬಂದಿದೆ ಎಂದು ಡಿಸಿಎಂ ಡಿಕೆಶಿಗೆ ನಿಖಿಲ್ ಟಾಂಗ್ ನೀಡಿದರು.
ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯ ಬಂತು. ಮಂಡ್ಯದಲ್ಲಿ ಗೆದ್ದ ಬಳಿಕ ಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರ ಆಶೀರ್ವಾದದಿಂದ ಕೈಗಾರಿಕಾ ಖಾತೆ ಹೊಂದಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಯುವಜನತೆ ವಿದ್ಯಾವಂತರಿದ್ದಾರೆ. ಅವರಿಗೆ ಸಮರ್ಪಕ ಉದ್ಯೋಗಾವಕಾಶಗಳಿಲ್ಲ. ಯುವಜನತೆಗೆ ಉದ್ಯೋಗ ದೊರಕಿಸಿಕೊಡಬೇಕು ಎಂಬುದು ಕುಮಾರಣ್ಣನ ಆಶಯ ಎಂದ ಅವರು, ಚನ್ನಪಟ್ಟಣದಲ್ಲಿ ದೇವೇಗೌಡರು ಇಗ್ಗಲೂರು ಡ್ಯಾಂ ನಿರ್ಮಾಣ ಮಾಡಿದ್ದಾರೆ. ಇದು ತಾಲೂಕಿನ ರೈತರಿಗೆ ದೇವೇಗೌಡರು ನೀಡಿರುವ ಕೊಡುಗೆ. ಇದನ್ನು ಇಲ್ಲಿನ ಜನ ಪ್ರತಿದಿನ ನೆನಪು ಮಾಡಿಕೊಳ್ಳುತ್ತಾರೆ. ತಾಲೂಕಿನ ಜನತೆ ಹಿಂದಿನಿಂದಲೂ ನಮ್ಮ ಕುಟುಂಬದ ಜತೆ ನಿಂತಿದ್ದಾರೆ. ಮುಂದೆಯೂ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ!
ಭಾಷಣದುದ್ದಕ್ಕೂ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರು ಐದು ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಾರೆ. ಅದನ್ನು ಸಮರ್ಪಕವಾಗಿ ಕೊಡ್ತಿದ್ದಾರಾ?, ಗ್ಯಾರಂಟಿ ಹೆಸರಲ್ಲಿ ಈ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ರಾಜ್ಯದ ಜನತೆ ಇಂತಹ ಭ್ರಷ್ಟ ಸರ್ಕಾರ ಎಂದೂ ನೋಡಿಲ್ಲ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ 187ಕೋಟಿ ರೂ.ಗಳನ್ನು ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದೆ. ಸ್ವತಃ ಸಿಎಂ ಅವರೇ ಇದನ್ನು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ಡಿಸಿಎಂಗೆ ಈಗ ಚನ್ನಪಟ್ಟಣ ನೆನಪಿಗೆ ಬಂದಿದೆ.
ಚನ್ನಪಟ್ಟಣಕ್ಕೆ ಕಾಂಗ್ರೆಸ್ ಕೊಡುಗೆ ಏನು? ಎಂಬುದನ್ನು ನೀವು ಪ್ರಶ್ನೆ ಮಾಡಬೇಕು ಎಂದರು.
ನಿಖಿಲ್ ಗೆಲ್ಲಿಸೋಣ!
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮಾತನಾಡಿ, ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಈ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯ ಇದೆ. ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡೋಣ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಗೆಲ್ಲಿಸಿಕೊಂಡು ಬರೋಣ ಎಂದರು.