ಚನ್ನಪಟ್ಟಣ ಟಿಎಪಿಸಿಎಂಎಸ್​ ಚುನಾವಣೆ ಕೊನೆ ಕ್ಷಣದಲ್ಲಿ ರದ್ದು

50162c7a-4464-420c-9802-38527cab9faf
Published on

ಚನ್ನಪಟ್ಟಣ: ನಗರದ ಪ್ರತಿಷ್ಠಿತ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಭಾನುವಾರ ನಿಗಧಿಯಾಗಿದ್ದ ಚುನಾವಣೆ ಕೊನೆಕ್ಷಣದಲ್ಲಿ ರದ್ದಾಗಿದೆ.

ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿಎಪಿಸಿಎಂಎಸ್ ನ ಮುಂದಿನ ಐದು ವರ್ಷದ ಆಡಳಿತ ಮಂಡಳಿ‌ ನಿರ್ದೇಶಕರ ಆಯ್ಕೆಗೆ ಡಿ.3 ರ ಭಾನುವಾರ ಚುನಾವಣೆ ನಿಗಧಿಯಾಗಿತ್ತು. ಅದಕ್ಕಾಗಿ ಸಕಲ ಸಿದ್ದತೆಯೂ ನಡೆದಿತ್ತು. ಆದರೆ, ಶನಿವಾರ ಸಂಜೆ ಚುನಾವಣೆ ಮುಂದೂಡಿಕೆ ಮಾಡಿ ಸಹಕಾರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಸಂಸ್ಥೆಯ 12 ಮಂದಿ ನಿರ್ದೇಶಕರ ಆಯ್ಕೆಗೆ ಹಲವಾರು ಮಂದಿ ನಾಮಪತ್ರ ಸಲ್ಲಿಸಿದರು. ಈ ಪೈಕಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಏಕೈಕ ಅಭ್ಯರ್ಥಿಯಾಗಿದ್ದ ಜೆಡಿಎಸ್ ಬೆಂಬಲಿತ ರೇವಹೆಗ್ಗಡೆ ಅವಿರೋಧವಾಗಿ ಆಯ್ಕೆಗೊಂಡಿದ್ದರು‌ ಇನ್ನುಳಿದಂತೆ, ಎ ತರಗತಿಯ 5 ಸ್ಥಾನಗಳಿಗೆ, 9 ಅಭ್ಯರ್ಥಿಗಳು ಹಾಗೂ ಬಿ ತರಗತಿಯ 6 ಸ್ಥಾನಗಳಿಗೆ 22 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಈ ಪೈಕಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇದ್ದರು‌. ಚುನಾವಣೆ ಸಮೀಪಿಸುತ್ತಿದ್ದಂತೆ ಹಲವಾರು ಅಭ್ಯರ್ಥಿಗಳು ಕಣದಿಂದ ನಿವೃತ್ತಿ ಘೋಷಿಸಿ, ಉಳಿದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದರು.

ಸಕಲ ಸಿದ್ದತೆಯಾಗಿತ್ತು;

ಸಂಸ್ಥೆಯ 11 ಮಂದಿ ನಿರ್ದೇಶಕರ ಆಯ್ಕೆಯ ಚುನಾವಣೆಗೆ ಸಕಲ ಸಿದ್ದತೆ ಪೂರ್ಣಗೊಂಡಿತ್ತು. ಇದಕ್ಕಾಗಿ ಮತದಾನ ನಡೆಯುವ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತದಾನಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮತಪತ್ರಗಳು, ಮತಕೇಂದ್ರದ ಬಳಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿದ್ದವು. ಚುನಾವಣಾ ಬಂದೋಬಸ್ತ್ ಗಾಗಿ ಪೊಲೀಸ್ ಇಲಾಖೆಯ ಸಹಕಾರವನ್ನು ಸಹ ಪಡೆಯಲಾಗಿತ್ತು. ಚುನಾವಣೆಯಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳು ಪ್ರಚಾರ ನಡೆಸುವ ಜೊತೆಗೆ, ನಾಳಿನ ಮತದಾನಕ್ಕೆ ಬೇಕಾದ ಸಿದ್ದತೆ ನಡೆಸಿದ್ದರು. ಆದರೆ, ಶನಿವಾರ ರಾತ್ರಿ ಚುನಾವಣೆ ಮುಂದೂಡಿಕೆಯ ಆದೇಶ ಹೊರಬಿದ್ದ ಕಾರಣ, ಚುನಾವಣೆ ರದ್ದುಗೊಂಡಿದೆ. ಚುನಾವಣೆ ರದ್ದುಗೊಂಡಿರುವುದನ್ನು ಚುನಾವಣಾಧಿಕಾರಿ ಧೃಢಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net