

ಚನ್ನಪಟ್ಟಣ ಸಾತನೂರು ರಸ್ತೆಯಲ್ಲಿ ನಗರಸಭೆ ಕಾರ್ಯಾಚರಣೆ ಮನವಿಗೆ ಸ್ಪಂದಿಸದಿದ್ದುದಕ್ಕೆ ಕ್ರಮ
ಚನ್ನಪಟ್ಟಣ
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಸಾತನೂರು ರಸ್ತೆಯಲ್ಲಿನ ಅಂಗಡಿ ಮಳಿಗೆಗಳ ಎದುರು ಅನಧಿಕೃತವಾಗಿ ಅಳವಡಿಸಿದ್ದ ಶೀಟ್ಗಳು ಮತ್ತು ಒತ್ತುವರಿಯನ್ನು ನಗರಸಭೆ ಅಧಿಕಾರಿಗಳು ಗುರುವಾರ ತೆರವು ಗೊಳಿಸಿದರು.
ಬೆಳಗ್ಗೆಯೇ ಪೊಲೀಸರ ಸಹಕಾರದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಸಾತನೂರು ವೃತ್ತದ ಬಳಿಯಿಂದ ಕಾರ್ಯಾಚರಣೆ ಆರಂಭಸಿದ ಅಧಿಕಾರಿಗಳು, ಕಾವೇರಿ ಜಲಮಂಡಳಿವರೆಗೆ ರಸ್ತೆಯ ಎರಡು ಬದಿಯ ಅಂಗಡಿಗಳ ಮುಂದೆ ಅನಧಿಕೃತವಾಗಿ ಅಳವಡಿಸಿದ್ದ ಶೀಟ್ಗಳನ್ನು ತೆರವುಗೊಳಿಸಿದರು.
ಸಾತನೂರು-ಹಲಗೂರು ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ರಸ್ತೆಯ ಎರಡು ಬದಿಯಲ್ಲಿ ಹಲವಾರು ವರ್ಷಗಳಿಂದ ಅಂಗಡಿ ಮಳಿಗೆಗಳ ಮಾಲೀಕರು, ತಮ್ಮ ಅಂಗಡಿ ವ್ಯಾಪ್ತಿ ಮೀರಿ ರಸ್ತೆಗೆ ಚಾಚಿದಂತೆ ಶೀಟ್ಗಳನ್ನು ಅಳವಡಿಸಿದ್ದರು.
ಇದರಿಂದಾಗಿ ರಸ್ತೆ ಕಿರಿದಾಗಿದ್ದು, ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಇಂದು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
ಈ ವಿಚಾರ ಸಂಬಂಧ ನಗರಸಭೆಯಿಂದ ಅಂಗಡಿಗಳ ಮಾಲೀಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಅಂಗಡಿಗಳ ಮಾಲೀಕು ನಿರ್ಲಕ್ಷ್ಯ ತೋರಿದ್ದರಿಂದ ಎರಡು ದಿನಗಳ ಹಿಂದೆ ನೋಟಿಸ್ ಸಹ ನೀಡಲಾಗಿತ್ತು. ಆದರೂ ಅಂಗಡಿ ಮಾಲೀಕರು ತಲೆಕೆಡಿಸಿಕೊಂಡಿರಲಿಲ್ಲ. ಅಂತಿಮವಾಗಿ ಪೊಲೀಸರ ಸಹಕಾರದೊಂದಿಗೆ ಗುರುವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು, ಅನಧಿಕೃತ ಶೀಟ್ಗಳನ್ನು ತೆರವುಗೊಳಿಸಿದರು.
ನಗರಸಭೆ ತೆರವು ಕಾರ್ಯಾಚರಣೆ ಕೈಗೊಳ್ಳುತ್ತಿದ್ದಂತೆ ರಸ್ತೆಯಲ್ಲಿದ್ದ ಕೆಲವು ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತರಾಗಿ ಶೀಟ್ಗಳನ್ನು ತೆರವುಗೊಳಿಸಲು ಮುಂದಾದ ದೃಶ್ಯ ಕಂಡುಬಂತು. ಈ ವೇಳೆ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಇದ್ದರು.