

ಚನ್ನಪಟ್ಟಣ:
ನಗರದ ರೈಲ್ವೆ ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಹಾಗೂ ಎಲೇಕೇರಿ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಸಂಸದ ಡಾ. ಸಿ.ಎನ್. ಮಂಜುನಾಥ್ ಶುಕ್ರವಾರ ಪರಿಶೀಲನೆ ನಡೆಸಿದರು.
ರೈಲ್ವೆ ಅಧಿಕಾರಿಗಳೊಂದಿಗೆ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯನ್ನು ಪರಿಶೀಲನೆ ನಡೆಸುವ ಜೊತೆಗೆ, ಅಧಿಕಾರಿಗಳಿಂದ ಕಾಮಗಾರಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಂದವಾಗಿರಲಿ!
ಕೇಂದ್ರ ಸರ್ಕಾರ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಬಹುಕೋಟಿ ಅನುದಾನವನ್ನು ನೀಡಿದೆ. ಬೊಂಬೆ ಮಾದರಿಯಲ್ಲಿ ಬರುವ ಈ ನಿಲ್ದಾಣ ಅಂದವಾಗಿರಲಿ. ರೂಪುರೇಷೆಯಲ್ಲಿರುವ ಎಲ್ಲವೂ ಸರಿಯಾಗಿ ಮೂಡಿಬರಲಿ. ಆದಷ್ಟೂ ಬೇಗ ಕೆಲಸ ಪೂರ್ಣಗೊಂಡು ಸುಸಜ್ಜಿತ ಮಾದರಿಯ ರೈಲು ನಿಲ್ದಾಣ ಸಾರ್ವಜನಿಕರಿಗೆ ಸೇವೆ ಸದ್ಬಳಕೆಯಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಳಂಬಕ್ಕೆ!
ನಿಲ್ದಾಣ ಪರಿಶೀಲನೆಯ ಬಳಿಕ ಪಕ್ಕದಲ್ಲೇ ಇರುವ ಎಲೆಕೇರಿ ರೈಲ್ವೆ ಮೇಲ್ಸುತುವೆ ಕಾಮಗಾರಿಯನ್ನು ಸಂಸದ ವೀಕ್ಷಿಸಿದರು. ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಹು ಅನುಕೂಲವಾಗಿರುವ ಈ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಸೂಚಿಸಿದರು. ಕೆಲ ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದಾಗ ನಿಗಧಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದ್ದೀರಿ. ಆದರೆ, ಇಷ್ಟೊಂದು ವಿಳಂಬ ಯಾಕೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರೊಂದಿಗೆ ಬೈರಾಪಟ್ಟಣ ಬಳಿ ಪ್ರಗತಿಯಲ್ಲಿರುವ ಮಾವು ಸಂಸ್ಕರಣಾ ಘಟಕವನ್ನು ಸಹ ಸಂಸದರು ವೀಕ್ಷಿಸಿದರು. ಈ ವೇಳೆ ನಗರಸಭಾ ಸದಸ್ಯೆ ಸುಮಾ ರವೀಶ್, ಮುಖಂಡರಾದ ರಾಂಪುರ ದರಣೀಶ್, ಲಿಂಗೇಗೌಡ, ಶಿವಕುಮಾರ್ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.