

ನಡೆದಿದೆ ರಾಜಕೀಯ ಚದುರಂಗದಾಟ - ಎಲ್ಲೆಡೆ ಪಕ್ಷಾಂತರದ್ದೇ ಚರ್ಚೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಚನ್ನಪಟ್ಟಣ ಉಪ ಚುನಾವಣೆಗೂ ಮುನ್ನವೇ ಮತ್ತೊಂದು ರಾಜಕೀಯ ಜಿದ್ದಾ ಜಿದ್ದಿನ ಚುನಾವಣೆ ಎದುರಿಸಲು ಸಜ್ಜುಗೊಳ್ಳುತ್ತಿದೆ. ಈಗಾಗಲೇ ಚನ್ನಪಟ್ಟಣ ಉಪಚುನಾವಣೆ ಕಣ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ದೆಹಲಿವರೆಗೂ ರಾಜಕೀಯ ನಾಯಕರು ತೆರಳಿದ್ದರೆ, ಇತ್ತ ಎನ್ಡಿಎ ಮೈತ್ರಿ ಕೂಟಕ್ಕೆ ಸವಾಲು ಒಡ್ಡಲು ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಈಗಾಗಲೇ ಸರ್ಕಾರ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದರ ಅನುಸಾರ ಉಪವಿಭಾಗಾಧಿಕಾರಿ ಜಿಲ್ಲೆಯ ವಿವಿಧ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಿದ್ದಾರೆ. ಅದೇ ರೀತಿ ಚನ್ನಪಟ್ಟಣ ನಗರಸಭೆಯ ಎರಡನೇ ಅವಧಿಗೆ ಚುನಾವಣೆ ನಡೆಯಲಿದೆ. ಆದರೆ, ಕಳೆದ ಅವಧಿಯಲ್ಲಿ ಬಹುಮತದೊಂದಿಗೆ ಅಧಿಕಾರ ಪಡೆದಿದ್ದ ಜೆಡಿಎಸ್ಗೆ ಈ ಬಾರಿ ಆ ಪಕ್ಷದ ಸದಸ್ಯರೇ ಸವಾಲಾಗಿದ್ದು, ಇದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಸ್ತುತ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮಿಸಲಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ಚನ್ನಪಟ್ಟಣ ನಗರಸಭೆಯಲ್ಲಿ ಜೆಡಿಎಸ್ನ ಪ್ರಾಬಲ್ಯ ಇತ್ತು. ಒಟ್ಟು 31 ಮಂದಿ ಸದಸ್ಯರಲ್ಲಿ 16 ಜೆಡಿಎಸ್, ತಲಾ 7 ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇದ್ದರು.
ಆದರೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಅಧ್ಯಕ್ಷರಾದಿಯಾಗಿ ಒಟ್ಟು 9 ಮಂದಿ ಕಾಂಗ್ರೆಸ್ ಸೇರಿದರು. ಇದರೊಂದಿಗೆ ಸಂಖ್ಯಾಬಲದಲ್ಲಿ ಕಾಂಗ್ರೆಸ್ ಶಕ್ತಿ ಪಡೆದುಕೊಂಡಿತು. ಈಗ ಮತ್ತಿಬ್ಬರು ಸದಸ್ಯರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿದೆ. ಇದು ನಿಜವೇ ಆದರೆ ಕಾಂಗ್ರೆಸ್ 18 ಮತ್ತು ಮೈತ್ರಿ ಪಕ್ಷಗಳ ಒಟ್ಟು ಬಲ 12ಕ್ಕೆ ಕುಸಿತ ಕಾಣಲಿದೆ. ಇದು ಅಧಿಕಾರ ಉಳಿಸಿಕೊಳ್ಳಬೇಕಿರುವ ಮೈತ್ರಿಗೆ ದೊಡ್ಡ ಸವಾಲಿನ ಕೆಲಸವೇ ಆಗಲಿದೆ. ಆದರೂ ಮೈತ್ರಿ ಪಕ್ಷ ಪ್ರಯತ್ನವನ್ನು ಬಿಟ್ಟಿಲ್ಲ. ಮೈತ್ರಿಗೆ ಪಕ್ಷೇತರ ಸದಸ್ಯರ ಬಲವೂ ಇದೆ ಎನ್ನಲಾಗಿದೆ. ಜತೆಗೆ ಸಂಸದರ ಮತವೂ ದೊರೆಯಲಿದೆ. ಆದರೂ ಮತ್ತೆ ಕನಿಷ್ಠ ಮೂರು ಸದಸ್ಯರನ್ನು ತನ್ನತ್ತ ಸೆಳೆಯಬೇಕಿದೆ.
ಪಾಂತರ ಸಾಮಾನ್ಯವಾಗಿ ಅಧಿಕಾರದ ಆಸೆಗಾಗಿಯೇ ಆಗುತ್ತದೆ. ಈಗ ಚುನಾವಣೆ ಎದುರಾಗಿರುವ ಹೊಸ್ತಿಲಲ್ಲಿ, ಕಾಂಗ್ರೆಸ್ಗೆ ಹಾರಿರುವ ಜೆಡಿಎಸ್ ಸದಸ್ಯರಲ್ಲಿ ಕೆಲವರು ಬಿಸಿಎಂ ಎ ವರ್ಗದ ಅಡಿಯಲ್ಲಿಯೇ ಬರಲಿದ್ದು, ಇವರು ಈಗಾಗಲೇ ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಮುಂದೆ ಟವೆಲ್ ಹಾಕಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನೀಡಲಾದ ಭರವಸೆಗಳಂತೆ ನಮ್ಮ ಅಭಿಲಾಷೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರೇ ಅಧಿಕಾರಕ್ಕೆ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್ನೊಳಗೆ ಹಲವಾರು ವರ್ಷಗಳಿಂದ ದುಡಿದ ನಿಷ್ಠಾವಂತ ಸದಸ್ಯರ ಬೇಸರಕ್ಕೆ ಕಾರಣವಾಗಿದೆ. ಕಾಂಗ್ರೆಸ್ನ ಹಿರಿಯ ಸದಸ್ಯ ವಾಸೀಲ್ ಅಲಿಖಾನ್ ಈಗಾಗಲೇ ಅಧ್ಯಕ್ಷ ಸ್ಥಾನವನ್ನು ನಮಗೇ ಕೊಡಬೇಕು ಎನ್ನುವ ಬೇಡಿಕೆಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದು, ಪಕ್ಷಕ್ಕಾಗಿ ಮಾಡಿದ ಸೇವೆಯನ್ನು ಸಹ ಮನವರಿಕೆ ಮಾಡಿಕೊಟ್ಟಿದ್ದಾರೆ. ಉಪಚುನಾವಣೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠರಿಗೆ ಮಣೆ ಹಾಕುವರೋ ಇಲ್ಲ, ವಲಸಿಗರಿಗೋ ಎನ್ನುವ ನಿರ್ಧಾರದ ಮೇಲೆ ವಾಸೀಲ್ ಅಲಿಖಾನ್ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚನ್ನಪಟ್ಟಣ ನಗರಸಭೆ ಕೈ ವಶವಾಗುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ, ಅಧಿಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಇದೆ. ಒಂದು ವೇಳೆ ಇವರು ರಿವರ್ಸ್ ಆಪರೇಷನ್ಗೆ ಕೈ ಹಾಕಿದರೆ ಚಿತ್ರಣ ಬದಲಾಗಬಹುದು. ಆದರೆ, ಇದಕ್ಕೆ ಡಿ.ಕೆ.ಶಿವಕುಮಾರ್ ಅವಕಾಶ ಮಾಡಿಕೊಡುವುದು ಕಡಿಮೆ ಎನ್ನಲಾಗುತ್ತಿದೆ. ಒಂದು ವೇಳೆ ಎಲ್ಲವೂ ಕಾಂಗ್ರೆಸ್ ಅಂದುಕೊಂಡಂತೆ ಆದರೆ ಉಪ ಸಮರಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಪ್ರಾಬಲ್ಯ ಹೆಚ್ಚುವುದು ಗ್ಯಾರಂಟಿ.