

ಚನ್ನಪಟ್ಟಣ: ತಾಲೂಕಿನ ಕೆಲ ಗ್ರಾಪಂಗಳ ಆಡಳಿತ ಈಗಾಗಲೇ ಹಳಿತಪ್ಪಿರುವ ಆರೋಪದ ನಡುವೆ ಗ್ರಾಪಂಗಳ ದೊಡ್ಡಣ್ಣ ಎನ್ನಲಾಗುವ ತಾಲೂಕು ಪಂಚಾಯಿತಿಯಲ್ಲೂ ಹಲವು ಸಮಸ್ಯೆ ಕಾಡುತ್ತಿದ್ದು, ಕಚೇರಿಯ ಬಹುತೇಕ ಹುದ್ದೆಗಳಿಗೆ ಅಧಿಕಾರಿಗಳು, ಸಿಬ್ಬಂದಿ ನೇಮಕವಾಗದ ಪರಿಣಾಮ ಯಾವುದೇ ಕೊಠಡಿಗೆ ತೆರಳಿದರೂ ಎಲ್ಲ ಟೇಬಲ್, ಕುರ್ಚಿಗಳು ಖಾಲಿ ಖಾಲಿಯಾಗಿ ಗೋಚರಿಸುತ್ತ ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿವೆ.
ಹೌದು... ಚನ್ನಪಟ್ಟಣ ತಾಪಂಗೆ 22 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿದ್ದರೂ ಈ ಪೈಕಿ ಕೇವಲ 5 ಹುದ್ದೆಗಳಿಗೆ ಮಾತ್ರ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ 17 ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ತಾಪಂನ ಸ್ಥಿತಿಯೇ ಹೀಗಾದರೆ, ಸರ್ಕಾರದ ಯೋಜನೆಗಳು ಹಾಗೂ ಸಾರ್ವಜನಿಕರ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ.
ಮೇಲಧಿಕಾರಿಗಳು ಗಮನಹರಿಸಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಇಲಾಖೆಯ ಅಧಿಕಾರಿ, ನೌಕರರ ಪಾತ್ರ ಪ್ರಮುಖ. ಆದರೆ, ತಾಪಂನಲ್ಲಿ ಪ್ರಮುಖವಾಗಿ ಅಧಿಕಾರಿ ಹಾಗೂ ನೌಕರರು ಸೇರಿ ಶೇ.85 ಸಿಬ್ಬಂದಿ ಕೊರತೆ ಕಾಡುತ್ತಿರುವ ಕಾರಣ ಸಣ್ಣಪುಟ್ಟ ಕೆಲಸಗಳಿಗೂ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಸರ್ಕಾರದ ಸೌಲಭ್ಯಗಳಿಂದ ಅರ್ಹರು ವಂಚಿತರಾಗುತ್ತಿದ್ದಾರೆ. ಇನ್ನಾದರೂ ಅಗತ್ಯ ಸಿಬ್ಬಂದಿ ಭರ್ತಿಗೆ ಸಂಬಂಧಿತ ಮೇಲಧಿಕಾರಿಗಳು ಗಮನಹರಿಸಬೇಕಿದೆ. ಚುನಾವಣೆ ಯಾವಾಗ? ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣ ಹಲವಾರು ವರ್ಷಗಳಿಂದ ತಾಪಂಗೆ ಜನಪ್ರತಿನಿಧಿಗಳು ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಆದರೂ ತಾಪಂನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಗತ್ಯ ಸಿಬ್ಬಂದಿ ನೇಮಕ್ಕೆ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಕ್ರಮವಹಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಐದೇ ಹುದ್ದೆ! ತಾಪಂ ಇಒ, ತಾಲೂಕು ಯೋಜನಾಧಿಕಾರಿ, ವ್ಯವಸ್ಥಾಪಕರು, ಬೆರಳಚ್ಚುಗಾರ ಹಾಗೂ ದ್ವೀತಿಯ ದರ್ಜೆ ಸಹಾಯಕ ಹೊರತುಪಡಿಸಿ ಕಚೇರಿಯಲ್ಲಿ ಉಳಿದ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಇಲ್ಲ. ಪ್ರಮುಖ ಹುದ್ದೆಗಳೇ ಖಾಲಿ ಇರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ನೇಮಕವಾಗಬೇಕಾದವರು ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರು(ಗ್ರಾ.ಉ), ಸಹಾಯಕ ನಿರ್ದೇಶಕರು(ಪಂ.ರಾ), ಪ್ರಥಮ ದರ್ಜೆ ಸಹಾಯಕರು(ಆಡಳಿತ ಶಾಖೆ ಮತ್ತು ಲೆಕ್ಕ ಶಾಖೆ), ದ್ವೀತಿಯ ದರ್ಜೆ ಸಹಾಯಕರು, ವಾಹನ ಚಾಲಕರು, ಡಿ. ಗ್ರೂಪ್ ನೌಕರರ ಹುದ್ದೆಗಳು ಖಾಲಿಯಿವೆ. ಹೊರಗುತ್ತಿಗೆ ಆಧಾರದಲ್ಲಿ ಕೆಲವರು ಹಾಗೂ ಗ್ರಾಪಂಗಳಿಂದ ಕೆಲವರನ್ನು ಎರವಲು ಪಡೆದು ಕಚೇರಿ ನಡೆಸಲಾಗುತ್ತಿದೆ. ಸ್ಥಳಿಯ ಆಡಳಿತಗಳದ್ದೂ ಇದೇ ಸ್ಥಿತಿ ತಾಲೂಕಿನಲ್ಲಿ 32 ಗ್ರಾಪಂಗಳಿದ್ದು, ಇವುಗಳ ಪೈಕಿ ಹಲವಾರು ಗ್ರಾಪಂಗಳ ಆಡಳಿತ ಹಳಿ ತಪ್ಪಿವೆ. ಕೆಲ ಗ್ರಾಪಂಗಳಿಗೆ ಸಂಬಂಧಿಸಿದ ಹೋರಾಟ ಹಾಗೂ ಆರೋಪ, ಪ್ರತ್ಯಾರೋಪಗಳೇ ಇದಕ್ಕೆ ಸಾ. ಗ್ರಾಮಾಭಿವೃದ್ಧಿಯ ಧ್ಯೋತಕವಾಗಬೇಕಾದ ಸ್ಥಳಿಯ ಆಡಳಿತ ವ್ಯವಸ್ಥೆ ಕೆಲವೆಡೆ ಅವ್ಯವಸ್ಥೆಯಾಗಿರುವುದು, ಈ ಅವ್ಯವಸ್ಥೆ ಸರಿಪಡಿಸಬೇಕಾದ ತಾಪಂ ಹಲವಾರು ಸಮಸ್ಯೆಗಳಿಂದ ನರಳುತ್ತಿರುವುದು ದುರಂತವೇ ಸರಿ. ಬಯಲುಶೌಚಕ್ಕೆ ಮುಕ್ತವಾದ ಆವರಣ ಒಂದೆಡೆ ಸಿಬ್ಬಂದಿ ಕೊರತೆಯಾದರೆ, ಮತ್ತೊಂದೆಡೆ ಕಚೇರಿಯಲ್ಲಿ ಮೂಲಸೌಕರ್ಯ ಕೊರತೆಯೂ ತಾಪಂ ಕಚೇರಿಯನ್ನು ಕಾಡುತ್ತಿದೆ. ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳು ತಾಲೂಕು ಪಂಚಾಯಿತಿ ಮೂಲಕವೇ ಜಾರಿಗೊಳ್ಳುತ್ತವೆ. ಮುಖ್ಯವಾಗಿ ಸ್ವಚ್ಛ ಭಾರತ ಯೋಜನೆಯ ಬಯಲುಶೌಚಮುಕ್ತ ಗ್ರಾಪಂಗಳ ನಿರ್ಮಾಣ ಕಾರ್ಯ ಈ ಕಚೇರಿಯಿಂದಲೇ ಅನುಷ್ಠಾನವಾಗುತ್ತದೆ. ಆದರೆ, ಈ ಕಚೇರಿಯಲ್ಲೆ ಸುಸಜ್ಜಿತ ಶೌಚಗೃಹದ ವ್ಯವಸ್ಥೆ ಇಲ್ಲದಿರುವುದು ಶೋಚನೀಯ. ತಾಪಂ ಹಿಂಭಾಗವಿರುವ ಸಾಮರ್ಥ್ಯಸೌಧದ ಬಳಿ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಇಲ್ಲವಾಗಿದೆ. ಇಲ್ಲಿ ಸಮರ್ಪಕವಾಗಿ ನೀರಿನ ಸೌಲಭ್ಯವನ್ನೂ ಕಲ್ಪಿಸದಿರುವುದು ದುರಂತ. ಬಯಲುಶೌಚಮುಕ್ತ ಮಾಡುವ ಸಂಕಲ್ಪ ಹೊಂದಿರುವ ತಾಪಂ ಆವರಣವೇ ಬಯಲುಶೌಚಕ್ಕೆ ಮುಕ್ತವಾಗಿದೆ.
ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಮರ್ಪಕವಾಗಿ ತಲುಪಬೇಕು ಎಂಬುದಾದರೆ ಅದರಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಪಾತ್ರ ಪ್ರಮುಖ. ಆದರೆ, ಗ್ರಾಮ ಆಡಳಿತದ ಶಕ್ತಿಸೌಧ ಎನ್ನಲಾಗುವ ತಾಲೂಕು ಪಂಚಾಯಿತಿಯಲ್ಲಿಯೇ ಪ್ರಮುಖ ಅಧಿಕಾರಿ, ನೌಕರರ ಹುದ್ದೆಗಳು ಖಾಲಿ ಇರುವುದು ದುರಂತ. ಈ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಶಾಸಕರು ಹಾಗೂ ಮೇಲಧಿಕಾರಿಗಳು ಗಮನಹರಿಸಬೇಕು. > ಬೇವೂರು ಯೋಗೇಶ್ ಕಕಜವೇ ಜಿಲ್ಲಾಧ್ಯ ಕೇವಲ ತಾಪಂ ಅಷ್ಟೇ ಅಲ್ಲದೇ ಕೆಲ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಇರುವುದು ನನ್ನ ಗಮನಕ್ಕಿದೆ. ಹಲವಾರು ವರ್ಷಗಳಿಂದ ನೇಮಕಾತಿ ಆಗಿಲ್ಲ. ಖಾಲಿ ಹುದ್ದೆಗಳ ನಿಯೋಜನೆಗಾಗಿ ಸರ್ಕಾರದಮಟ್ಟದಲ್ಲಿ ಪ್ರಯತ್ನಿಸುವೆ. ಸಿಬ್ಬಂದಿ ಕೊರತೆ ಮುಂದುಮಾಡಿ ಸಾರ್ವಜನಿಕರ ಕೆಲಸಕಾರ್ಯಗಳಿಗೆ ಯಾವುದೇ ಅಡೆತಡೆ ಮಾಡದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ > ಸಿ.ಪಿ.ಯೋಗೇಶ್ವರ್ ಶಾಸಕರು, ಚನ್ನಪಟ್ಟಣ