ಚನ್ನಪಟ್ಟಣ
ಅಕ್ರಮಖಾತೆ ಸೇರಿದಂತೆ ಭ್ರಷ್ಟಾಚಾರದ ವಿವಾದಗಳಲ್ಲಿ ಸಿಲುಕಿದ ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ವರ್ಗಾವಣೆಗೊಂಡಿದ್ದಾರೆ.
ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಹುದ್ದೆಯಿಂದ ಇವರನ್ನು ಬಿಡುಗಡೆಗೊಳಿಸಿ, ಕೋಲಾರ ಜಿಲ್ಲೆಯ ಕುರಗಲ್ ಪಟ್ಟಣ ಪಂಚಾಯಿತಿಯ ಸಮುದಾಯ ಸಂಘಟನಾಧಿಕಾರಿ (ಮೂಲಹುದ್ದೆ) ಗೆ ನಿಯುಕ್ತಿಗೊಳಿಸಲಾಗಿದೆ. ಬುಧವಾರ ಪೌರಾಡಳಿತ ಇಲಾಖೆಯ ನಿರ್ದೇಶಕರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಪ್ರಸ್ತಾವನೆ ಹಿನ್ನೆಲೆ!
ಪುಟ್ಟಸ್ವಾಮಿ 2019 ರಲ್ಲಿ ಚನ್ನಪಟ್ಟಣ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾರ್ವಜನಿಕರಿಂದ 15 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದರು. ಇದರಿಂದಾಗಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಚಿತ್ರದುರ್ಗ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿತ್ತು. ಸದರಿ ಪ್ರಕರಣವು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಮಧ್ಯೆ ಮತ್ತೆ ಅವರು ಚನ್ನಪಟ್ಟಣ ನಗರಸಭೆಯ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಪಾದಿತ ಪುಟ್ಟಸ್ವಾಮಿ ಹಾಲಿ ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಸೇವೆಯಲ್ಲಿರುವ ಕಾರಣ ಪ್ರಕರಣದ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಯಿರುವುರಿಂದ ಸದರಿ ಆರೋಪಿಯಾದ ಪುಟ್ಟಸ್ವಾಮಿಯವರನ್ನು ರಾಮನಗರ ಜಿಲ್ಲೆ ಹೊರತುಪಡಿಸಿ ಬೇರೆಡೆಗೆ ವರ್ಗಾವಣೆ ಮಾಡುವಂತೆ ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕರು ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರು. ಈ ಪ್ರಸ್ತಾವನೆ ಹಿನ್ನೆಲೆಯಲ್ಲಿ ಇವರನ್ನು ವರ್ಗಾವಣೆ ಮಾಡಲಾಗಿದೆ.