

ಚನ್ನಪಟ್ಟಣ: ಅಂಚೆ ಮತದಾನ ಮಾಡಲು ಬಂದ ಸರ್ಕಾರಿ ಅಧಿಕಾರಿಯೊಬ್ಬರ ಮತಪತ್ರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ ಎಂಬುವವರು ಗುರುತು ಹಾಕಿ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಚುನಾವಣಾಧಿಕಾರಿ ಮುನೇಗೌಡ ಅವರಿಗೆ ಬಿಜೆಪಿ ದೂರು ನೀಡಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕರು ಮತ್ತು ಇತರ ಸಿಬ್ಬಂದಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಬುಧವಾರ ನಗರದ ತಾಲೂಕು ಕಚೇರಿಗೆ ಅಂಚೆ ಮತದಾನ ಮಾಡಲು ಬಂದ ಅಧಿಕಾರಿಯೊಬ್ಬರ ಮತಪತ್ರವನ್ನು ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ ಎಂಬುವರು ಪಡೆದುಕೊಂಡು ಅದಕ್ಕೆ ಗುರುತು ಹಾಕುತ್ತಿರುವುದು ವಿಡಿಯೋದಲ್ಲಿದೆ.
ಕಚೇರಿಯ ಮೇಲಂತಸ್ತಿನಲ್ಲಿ ಕೆಂಚೇಗೌಡ ಅವರು ಅಧಿಕಾರಿ ಜತೆ ಮಾತನಾಡುತ್ತ ಅವರ ಬಳಿಯಿದ್ದ ಮತಪತ್ರ ಪಡೆದುಕೊಂಡು ಅದರಲ್ಲಿ ಗುರುತು ಮಾಡಿ ನೀಡಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಚುನಾವಣಾ ಏಜೆಂಟ್ ದಿಲೀಪ್ ಎಂಬುವರು ದೂರು ನೀಡಿದ್ದಾರೆ.