

ಚನ್ನಪಟ್ಟಣ
ನಾನು ಗ್ರಾನೆಟ್ ಹೊಡೆದು ವಿದೇಶಕ್ಕೆ ಮಾರಲಿಲ್ಲ. ಯಾವುದೇ ಮಾಲ್ ಕಟ್ಟಿಸಲಿಲ್ಲ. ಕ್ವಾರಿ ನಡೆಸಲು ಇಲ್ಲ, ಕ್ವಾರಿಯವರಿಂದ ಹಣ ಪಡೆದವನು ಅಲ್ಲ ಎನ್ನುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಡಿಸಿಎಂ ಶಿವಕುಮಾರ್ ಹೆಸರೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.
ತಾಲೂಕಿನ ಮತ್ತೀಕೆರೆ ಗ್ರಾಪಂನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಎಂದಿಗೂ ಹಣ ಮಾಡಿದವಲ್ಲ, ಮೊನ್ನೆ ಯಾವುದೋ ಮಾಲ್ ಓಪನ್ ಮಾಡಿ ನನ್ನ ಮೂಲ ವೃತ್ತಿ ಬಿಸಿನೆಸ್, ರಾಜಕೀಯ ಫ್ಯಾಷನ್ ಅಂದರು. ಆದರೂ, ನಮ್ಮನ್ನು ಅವರನ್ನು ಒಂದೆ ತಕ್ಕಡಿಯಲಿ ಜನ ತೂಕ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎರಡು ಬಾರಿ ಸಿಎಂ ಆದರೂ ಯಾವತ್ತಿಗೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಲಂಚ ಕೇಳಲಿಲ್ಲ. ಇಷ್ಟು ವರ್ಷ ಕಿರಾತಕರ ಮಧ್ಯೆ ಯಾವ ರೀತಿ ಚುನಾವಣೆ ನಡೆಸಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು. ಕ್ಷೇತ್ರದಲ್ಲೂ ನನ್ನನ್ನು ಮುಗಿಸಲು ಸಾಕಷ್ಟು ಹುನ್ನಾಎರ ನಡೆಸಿದರು. ಆದರೆ, ಎರಡು ಬಾರಿಯೂ ನೀವೇ ಚುನಾವಣೆ ನಡೆಸಿ ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಅಭಿಮಾನದ ಋಣ ಈ ಜನ್ಮದಲ್ಲಿ ಮರೆಯುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನು ಜನ ನಂಬಿದರು. ಯಾವುದೇ ಉಚಿತ ನೀಡಲು ನನ್ನ ವಿರೋಧವಿಲ್ಲ. ಆದರೆ, ಅಧಿಕಾರಕ್ಕೆ ಬರಲು ಇಲ್ಲಸಲ್ಲದ ಆಶ್ವಾಸನೆ ನೀಡಿ ಈಗ ಆಡುತ್ತಿರುವ ನಾಟಕಕ್ಕೆ ನನ್ನ ವಿರೋಧವಿದೆ.
ಉಚಿತ ಯೋಜನೆಗಳನ್ನು ನೀಡಲು ಕಂಡಿಷನ್ ಹಾಕುತ್ತಿದ್ದಾರೆ. ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಡ್ರಾಮಾ ಮಾಡುತ್ತಿದ್ದಾರೆ ಎಂದು ಅಕ್ರೋಶವ್ಯಕ್ತಪಡಿಸಿದರು. ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಪ್ರಸುತ್ತ ಚುನಾವಣೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ಹಿಂದೆ ಹಳೆ ಲಾರಿ ಕೊಡಿಸಿ ದ್ವೇಷ ತೀರಿಸಿಕೊಳ್ಳಿ ಅನ್ನುತ್ತಿದ್ದರು. ಈಗ ದ್ವೇಷ ತೀರಿಸಿಕೊಳ್ಳಲು ಚುನಾವಣೆಗೆ ನಿಲ್ಲಿಸಿ ಎಂಬ ವಾತಾವರಣ ಇದೆ.
ಇಂದಿನ ಪರಿಸ್ಥಿತಿ ನೋಡಿದರೆ ನನ್ನ ಕಾರ್ಯಕರ್ತರನ್ನು ಚುನಾವಣೆ ಗೆ ನಿಲ್ಲಿಸಲು ಭಯವಾಗುತ್ತಿದೆ. ನಾನು ಸಿನಿಮಾ ರಂಗ ಬಿಟ್ಟು ರಾಜಕೀಯಕ್ಕೆ ಬಂದನಂತರ ಯಾವುದೇ ಆಸ್ತಿ ಮಾಡಲಿಲ್ಲ. ೨೦೧೮ರಲ್ಲೇ ರಾಜಕೀಯ ಬೇಡ ಎಂದು ಬಿಡಲು ಸಿದ್ದನಿದ್ದೆ. ಆದರೆ, ಬಡವರು ಬಲ್ಲಿದರ ಪರ ನಿಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ರಾಜಕೀಯದಲ್ಲಿ ಇದ್ದೇನೆ ಎಂದರು.