ಶತಚಂಡಿಕಾ ಮಹಾಯಾಗ ಸಂಪನ್ನ ಡಾ. ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ

20230717_182537
Published on

 ಚನ್ನಪಟ್ಟಣ

ಭಕ್ತರ ಸಂಕಷ್ಟ ನಿವಾರಣೆ ಉದ್ದೇಶದಿಂದ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ತಂತ್ರಭಾಗ-ಶತಚಂಡಿಕಾ ಮಹಾಯಾಗ ಸೋಮವಾರ ಸಂಪನ್ನವಾಯಿತು.

ಜು.11ರ ಮಂಗಳವಾರದಿಂದ 7 ದಿನ ಮಹಾಯಾಗ ನಡೆಯಿತು. ಅಂತಿಮ ದಿನವಾದ ಸೋಮವಾರ ಭೀಮನ ಅಮಾವಾಸ್ಯೆ ಅಂಗವಾಗಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಸೋಮವಾರ ದಶಮಹಾವಿದ್ಯಾ ಚಕ್ರ, ವಿಶ್ವಭೂಮಂಡಲ ಚಕ್ರ, ನಾಗಮಂಡಲ ಪೂಜೆ ಸೇರಿ ವಿಶೇಷ ಪೂಜೆಗಳು ನಡೆದವು. 11 ಹೋಮ ಕುಂಡಗಳಲ್ಲಿ 108 ಹೋಮ, 7 ಲಕ್ಷ ಬೀಜಾಕ್ಷರ, 7 ಲಕ್ಷ ಮಂತ್ರಗಳನ್ನು ಪಠಿಸಲಾಯಿತು. ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹಾಲರವಿ, ರಥೋತ್ಸವ ಕಾರ್ಯಕ್ರಮ ಮತ್ತು ಅಘೋರಿ ಹಾಗೂ ನಾಗಾ ಸಾಧುಗಳ ನೇತೃತ್ವದಲ್ಲಿ ಪೂರ್ಣಾಹುತಿ ನಡೆಯಿತು.

ಕ್ಷೇತ್ರದ ಪವಾಡ ಬಸವಪ್ಪನಿಗೆ ಪಾದಪೂಜೆ ಹಾಗೂ ಯಾಗ ಸ್ಥಳದ ಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಕಡೂರು ತಾಲೂಕಿನಿಂದ ಆಗಮಿಸಿರುವ ಪ್ರಧಾನ ಅರ್ಚಕ ನವೀಶ್ ಶಾಸ್ತ್ರಿ ನೇತೃತ್ವದ ಅರ್ಚಕರ ತಂಡ ಯಾಗ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟಿತು.

ಸೋಮವಾರ ಸಂಜೆ ನಡೆದ ಪೂರ್ಣಾಹುತಿಯಲ್ಲಿ ನೂರಾರು ಮಹಿಳೆಯರು ಬಾಗಿನ ಸೇರಿ ಯಾಗಕ್ಕೆ ಹಾಕುವ ವಸ್ತುಗಳನ್ನು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಸಲ್ಲಿಸಿದರು. ಪೂರ್ಣಾಹುತಿಗೂ ಮುನ್ನ ಪೂರ್ಣಕುಂಭ, ವಾಸ್ತುಹೋಮ, ಯಾಗ ಶಾಲೆ ಪ್ರವೇಶ ವಿವಿಧ ವಿಧಿವಿಧಾನಗಳು ಜರುಗಿದವು. ನವಗ್ರಹ ಪೂಜೆ, ಬಲಿಪ್ರಧಾನ, ಸಂಕಲ್ಪಹೋಮ 108 ಪ್ರಕಾರದ ಹೋಮಗಳು ಶ್ರದ್ಧಾಭಕ್ತಿಯಿಂದ ನಡೆದವು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ತಂತ್ರಭಾಗ-ಶತಚಂಡಿಕಾ ಯಾಗಕ್ಕೆ ವಿವಿಧ ಗಿಡಮೂಲಿಕೆ ಹಾಗೂ ಸೌದೆಗಳನ್ನು ತಂದು ಹಾಕುವ ಮೂಲಕ ಪುನೀತರಾದರು.

ಕ್ಷೇತ್ರದಲ್ಲಿ ಏಳು ದಿನ ನಡೆದ ತಂತ್ರಭಾಗ ಶತಚಂಡಿಕಾ ಮಹಾಯಾಗದಲ್ಲಿ ವಿವಿಧ ಮಠಾಧೀಶರು ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಹರಿದುಬಂದ ಜನಸಾಗರ!

ಯಾಗದ ಅಂತಿಮದಿನ ಹಾಗೂ ಭೀಮನ ಅಮಾವಾಸ್ಯೆ ಪ್ರಯುಕ್ತ ಗೌಡಗೆರೆ ಕ್ಷೇತ್ರಕ್ಕೆ ಸೋಮವಾರ ಭಕ್ತಸಾಗರವೇ ಹರಿದು ಬಂದಿತ್ತು. ಮುಂಜಾನೆಯಿಂದ ರಾತ್ರಿವರೆಗೂ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಲೋಕ ಕಲ್ಯಾಣಾರ್ಥವಾಗಿ ಕ್ಷೇತ್ರದಲ್ಲಿ ಏಳು ದಿನಗಳ ಮಹಾಯಾಗ ನಡೆಯಿತು. ಸಾವಿರಾರು ಭಕ್ತರು ಯಾಗದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಸಕಲ ಜೀವರಾಶಿಗಳ ಒಳಿತಿಗಾಗಿ ಶ್ರೀಕ್ಷೇತ್ರದಿಂದ ಅಪರೂಪವಾದ ತಂತ್ರಭಾಗ-ಶತಚಂಡಿಕಾ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಯಾಗವನ್ನು ಯಶಸ್ವಿಯಾಗಿಸಿದ್ದಾರೆ.

ಡಾ.ಮಲ್ಲೇಶ್ ಗುರೂಜಿ, ಧರ್ಮದರ್ಶಿ, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net