ಕಡೂರು ತಾಲೂಕಿನಿಂದ ಆಗಮಿಸಿರುವ ಪ್ರಧಾನ ಅರ್ಚಕ ನವೀಶ್ ಶಾಸ್ತ್ರಿ ನೇತೃತ್ವದ ಅರ್ಚಕರ ತಂಡ ಯಾಗ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಪೂರ್ಣಕುಂಭ, ವಾಸ್ತುಹೋಮ, ರಾಕ್ಷಯಜ್ಜ, ಯಾಗಾಶಾಲ ಪ್ರವೇಶ ಸೇರಿದಂತೆ ನಾನಾ ವಿಧಿವಿಧಾನಗಳು ಜರುಗಿದವು. ನವಗ್ರಹ ಪೂಜೆ, ಬಲಿಪ್ರಧಾನ, ಸಂಕಲ್ಪಹೋಮ ಸೇರಿದಂತೆ 108 ಪ್ರಕಾರದ ಹೋಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವದ ಅತಿಎತ್ತರದ ತಾಯಿ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹದ ಎದುರಿಗೆ ಸ್ಥಾಪಿಸಿರುವ 11 ಹೋಮಕುಂಡಗಳಲ್ಲಿ ಅರ್ಚಕರ ತಂಡ ಹೋಮ,ಹವನಗಳನ್ನು ನಡೆಸಿತು. ಆರಂಭದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಹೋಮಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದರು. ನೂರಾರು ದಂಪತಿಗಳು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.