

* ವೈದ್ಯರು, ಸಿಬ್ಬಂದಿ ಕೊರತೆ
* ತಜ್ಞರು ಯಾರೊಬ್ಬರೂ ಮೂಲಸ್ಥಳದಲ್ಲಿಲ್ಲ
* ಹಲವು ಸಮಸ್ಯೆಗಳಿಂದ ನರಳಾಟ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಆಸರೆಯಾಗಿರುವ ನಗರದ ಸಾರ್ವಜನಿಕ ಆಸ್ಪತ್ರೆ ಸರ್ಜರಿಗಾಗಿ ಕಾಯ್ದು ಕುಳಿತಂತಿದೆ.
ನಗರದ ಸಾರ್ವಜನಿಕ ಆಸ್ಪತ್ರೆ ತಾಲೂಕಿನ ಬಡಜನತೆಯ ಆರೋಗ್ಯ ರಕ್ಷಣೆಗೆ ಹಲವು ವರ್ಷಗಳಿಂದ ಅಪಾರ ಕೊಡುಗೆ ನೀಡಿದೆ. ಇತರ ಸರ್ಕಾರಿ ಆಸ್ಪತ್ರೆಗಳಿಗೆ ಹೊಲಿಸಿದರೆ, ಈ ಆಸ್ಪತ್ರೆ ನೂರು ಪಾಲು ಮೇಲು ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಇದರ ನಡುವೆಯೂ ಹಲವು ಸಮಸ್ಯೆಗಳಿಂದ ಆಸ್ಪತ್ರೆ ನರಳುತ್ತಿರುವುದೂ ಅಷ್ಟೇ ಸತ್ಯ.
ಪ್ರತಿನಿತ್ಯ ನೂರಾರು ಹೋರರೋಗಿಗಳು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದು ಹೋಗುವ ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ಅವಶ್ಯ ಎನಿಸಲಾದ ಮಕ್ಕಳ ವೈದ್ಯರೇ ಇಲ್ಲ. ಕಣ್ಣಿನ ವೈದ್ಯರು ರಜೆ ಮೇಲೆ ತೆರಳಿದ್ದಾರೆ. ತಾಲೂಕು ಆಸ್ಪತ್ರೆಯಾದರೂ ಚರ್ಮರೋಗ ತಜ್ಞರಿಲ್ಲ. ಒಬ್ಬರೇ ಪಿಜಿಶಿಯನ್ ಇದ್ದು, ಇನ್ನೊಬ್ಬರ ಅಗತ್ಯವಿದೆ. ಆಸ್ಪತ್ರೆಯಲ್ಲಿ ಪಿಸಿಯೋಥೆರಪಿ ಕೇಂದ್ರವಿದ್ದು, ಪಿಜಿಯೊಥೆರಪಿಸ್ಟ್ ಕೊರತೆಯಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಗ್ರೂಪ್ ಡಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಗತ್ಯವಾದ ತುರ್ತು ಚಿಕಿತ್ಸೆಯ ವೈದ್ಯರ ನೇಮಕವಾದರೆ, ಉಳಿದ ವೈದ್ಯರ ಒತ್ತಡ ಕಡಿಮೆಯಾಗಲಿದೆ.
ಆಸ್ಪತ್ರೆ ನಗರದ ಹೃದಯಭಾಗದ ಸುಸಜ್ಜಿತವಾದ ಜಾಗದಲ್ಲಿದ್ದು, ಕಾಯಕಲ್ಪ ನೀಡಬೇಕಿದೆ. ಹಳೆಯ ಕಟ್ಟಡವಾದರೂ ಸದ್ಯ ಉತ್ತಮ ಸ್ಥಿತಿಯಲ್ಲಿದ್ದು, ಕನಿಷ್ಠ ಬಣ್ಣವನ್ನಾದರೂ ಕಾಣಿಸಲು ಮುಂದಾಗಬೇಕಿದೆ. ಕಟ್ಟಡದ ಮೇಲ್ಛಾವಣಿಗೆ ಚುರುಕಿ ಸೇರಿ ಹಲವು ಸಣ್ಣಪುಟ್ಟ ಕೆಲಸ ಅವಶ್ಯವಾಗಿವೆ. ಐಸಿಯೂ ವಾರ್ಡ್ ಆರಂಭವಾದ ಬಳಿಕ ವಾರ್ಡ್‌ಗಳ ಕೊರತೆಯೂ ಕಾಡುತ್ತಿದೆ. ತುರ್ತು ಚಿಕಿತ್ಸಾ ಘಟಕ ಕಿಷ್ಕಿಂದೆಯಂತ ಜಾಗದಲ್ಲಿದ್ದು, ಪ್ರತ್ಯೇಕ ಜಾಗದ ಅವಶ್ಯಕತೆಯಿದೆ. ಇನ್ನೂ ಆಸ್ಪತ್ರೆಯಲ್ಲಿ ಡಯಾಲಿಸಸ್ ಕೇಂದ್ರವಿದ್ದು, ರೋಗಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೆಡ್‌ಗಳ ಅವಶ್ಯಕತೆಯಿದೆ. ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಸೇರಿ ಮೂಲ ಸವಲತ್ತುಗಳ ನಿವಾರಣೆಗೆ ಸಂಬಂಧಿಸಿದವರು ಶ್ರಮಿಸಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ಆಸ್ಪತ್ರೆಯಲ್ಲಿ ರಕ್ತ ಪರಿಶೀಲನಾ ಕೇಂದ್ರ (ಲ್ಯಾಂಬ್) ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಉನ್ನತೀಕರಿಸುವ ತುರ್ತು ಅವಶ್ಯಕತೆಯಿದೆ. ಕೆಲ ದುಬಾರಿ ಪರೀಕ್ಷೆಗಳು ಇಲ್ಲಿ ಲಭ್ಯವಿಲ್ಲದ ಕಾರಣ, ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಜನಸಾಮಾನ್ಯರು ಖಾಸಗಿ ಲ್ಯಾಬ್ ಗಳನ್ನು ಅವಲಂಬಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಇರುವ ಲ್ಯಾಂಬ್ ಅನ್ನು ಬೇರೆಡೆ ಸ್ಥಳಾಂತರಿಸುವ ಜತೆಗೆ, ಉನ್ನತೀಕರಿಸುವ ಕೆಲಸವೂ ಆಗಬೇಕಿದೆ. ಇದರೊಂದಿಗೆ, ಸಿಟಿ ಸ್ಕ್ಯಾನ್ ಸೇವೆಯೂ ಲಭ್ಯವಾದರೆ ಬಡಜನತೆಗೆ ಸಾಕಷ್ಟು ಅನುಕೂಲವಾಗಲಿದೆ.
ಆಸ್ಪತ್ರೆಯ ಹೆಡ್‌ಕ್ವಾರ್ಟರ್‌ನಲ್ಲಿ (ಮೂಲಸ್ಥಳದಲ್ಲಿ) ವೈದ್ಯರಿರಬೇಕು ಎಂಬುದು ಕಡ್ಡಾಯವಾಗಿದೆ. ಆದರೆ, ಬಹುತೇಕ ಯಾವ ವೈದ್ಯರು ಈ ನಿಯಮ ಪಾಲಿಸುತ್ತಿಲ್ಲ ಎಂಬುದು ವಿಪರ್ಯಾಸ. ಅದರಲ್ಲೂ ತುರ್ತು ಅವಶ್ಯಕ ಎನ್ನಲಾದ ವೈದ್ಯರು ಯಾವುದೇ ಕಾರಣಕ್ಕೂ ಮೂಲಸ್ಥಳ ಬಿಡುವಂತಿಲ್ಲ. ಆದರೆ, ಹೆರಿಗೆ ತಜ್ಜರು ಸೇರಿ ತುರ್ತು ಅವಶ್ಯಕ ವೈದ್ಯರು ಯಾರೊಬ್ಬರೂ ಮೂಲಸ್ಥಳದಲ್ಲಿಲ್ಲ. ಇದರ ಬಗ್ಗೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರವಾದ ಕ್ರಮ ಕೈಗೊಳ್ಳುವ ಅವಶ್ಯಕವಿದೆ.
ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ, ಇಲ್ಲಿ ವೈದ್ಯರ ಕೊರತೆ, ಸಿಬ್ಬಂದಿ ಕೊರತೆ, ಅತ್ಯಾಧುನಿಕ ಯಂತ್ರೋಪಕರಣ ಕೊರತೆಯಿದೆ ಎಂದರೆ ಬೇಸರದ ಸಂಗತಿ. ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ಚರ್ಚೆ ಬೇಡ. ಮುಂದೆ ಯಾವುದೇ ಸಮಸ್ಯೆ ಮರುಕಳಿಸದಂತೆ ಎಲ್ಲರೂ ಒಗ್ಗೂಡಿ ಆಸ್ಪತ್ರೆಗೆ ಕಾಯಕಲ್ಪ ನಿಡೋಣ.ಸಿ.ಪಿ.ಯೋಗೇಶ್ವರ್ ಶಾಸಕರು,
ಆಸ್ಪತ್ರೆ ಆಡಳಿತಾಧಿಕಾರಿ
ಡಾ.ಜಗದೀಶ್
ಇರುವ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಸ್ಪಚ್ಛತೆ ಹಾಗೂ ಸಾರ್ವಜನಿಕ ಸೇವೆಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಕೆಲ ಮೂಲ ವ್ಯವಸ್ಥೆಗಳ ಅವಶ್ಯಕತೆ ಹಾಗೂ ಸಿಬ್ಬಂದಿ ಕೊರತೆ ಇದೆ. ಇದನ್ನು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ಮಕ್ಕಳ ತಜ್ಞರ ಹುದ್ದೆ ಬಹಳ ಅವಶ್ಯವಾಗಿದೆ. ಕೆಲ ವೈದ್ಯರು ಔಷಧ, ಪರೀಕ್ಷೆಗಳಿಗೆ ಹೊರಗೆ ಬರೆಯುವ ಚಾಳಿ ರೂಢಿಸಿಕೊಂಡಿದ್ದಾರೆ. ಯಾವ ವೈದ್ಯರೂ ಕೇಂದ್ರಸ್ಥಾನದಲ್ಲಿಲ್ಲ. ಹಣಬಾಕತನವನ್ನು ಅಲ್ಲಗೆಳೆಯುವಂತಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಆರೋಗ್ಯ ಭಾಗ್ಯಕ್ಕೆ ಬೇಕಾದ ವ್ಯವಸ್ಥೆ ಸಂಬಂಧಪಟ್ಟವರು ಮಾಡಲಿ.
ಮಂಜೇಶ್ ಬಾಬು, ಸಾರ್ವಜನಿಕ