ಕಸ ವಿಲೇವಾರಿಗೆ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

IMG-20230628-WA0032.jpg
Published on

ಚನ್ನಪಟ್ಟಣ:

ನಗರಸಭೆಯ ಅವೈಜ್ಞಾನಿಕ ಕಸ ವಿಲೇವಾರಿಯನ್ನು‌ ವಿರೋಧಿಸಿ ಸಾರ್ವಜನಿಕರು ನಗರಸಭೆಯ ಕಸ ತುಂಬಿದ ಲಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ನಗರದ‌ ಮುನಿಯಪ್ಪನದೊಡ್ಡಿ ಬಳಿ ನಡೆದಿದೆ.

ನಗರದಿಂದ ಮುನಿಯಪ್ಪನದೊಡ್ಡಿಗೆ ಹೋಗುವ ರಸ್ತೆಯಲ್ಲಿ (ಸಾಮಾಜಿಕ ಅರಣ್ಯ ಇಲಾಖೆ ಪಕ್ಕ) ದ ಖಾಲಿಜಾಗದಲ್ಲಿ ಹಲವು ದಿನಗಳಿಂದ ನಗರದ ತ್ಯಾಜ್ಯ ಸುರಿಯಲಾಗುತಿತ್ತು. ಕಸದ ರಾಶಿ ಹೆಚ್ಚಳವಾಗಿ ದುರ್ನಾತ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಪ್ರತಿಭಟನೆ ನಡೆಸಿದರು.

ಕಸದ ಲಾರಿಯನ್ನು ಅಡ್ಡಗಟ್ಟಿದ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಕಸವನ್ನು ನಗರಸಭೆ ಡಂಪ್ ಮಾಡುತ್ತಿರುವುದಿಂದ ಈ ಭಾಗದ ಜನರ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದ ಈ ಕೂಡಲೇ ಈ ಜಾಗದಲ್ಲಿ ಕಸ ಹಾಕುವುದನ್ನು ನಿಲ್ಲಿಸಿ. ಇಲ್ಲ ನಮಗೆ ವಿಷ ನೀಡಿ ಕಸ ಹಾಕುವುದನ್ನು ಮುಂದುವರಿಸಿ ಎಂದು ಪಟ್ಟುಹಿಡಿದರು.

ಹಲವು ಗ್ರಾಮಗಳ ಜನತೆ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುತ್ತಾರೆ. ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಓಡಾಡುವ ಜಾಗದಲ್ಲಿ ನಗರಸಭೆ ತ್ಯಾಜ್ಯ ಸುರಿಯುತ್ತಿರುವುದು ಅಕ್ಷಮ್ಯ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಗಾಳಿ ಹೆಚ್ಚಾದಂತೆಲ್ಲ ದುರ್ವಾಸನೆ ಹರಡಿ ಜನ ಓಡಾಡುವುದೇ ದುಸ್ತರವಾಗಿ ಪರಿಣಮಿಸಿದೆ.

ಗಾಳಿ ಬಂದಂತೆ ಕಸ ಎಲ್ಲಡೆ ಹರಡುತ್ತಿದ್ದು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಹಾಳಾಗುತ್ತಿದೆ. ಮಕ್ಕಳಿಗೆ ಸುಂಕು ತಗಲಿ ಆಸ್ಪತ್ರೆಗೆ ಅಲೆಯುವಂತಾಗಿದ್ದು, ಈ ಕೂಡಲೇ ಕಸ ಹಾಕುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಗಾಳಿಗೆ ಕಸ ತೂರಿಬರುತ್ತಿದ್ದು, ಸಮೀಪದಲ್ಲಿನ ಬೋರ್‌ವೆಲ್ ಬಳಿ ಜಮಾವಣೆಗೊಳ್ಳುತ್ತಿದೆ. ಇದರಿಂದ ಬೋರ್ ನೀರು ಸಹ ಕಲುಷಿತಗೊಂಡಿದ್ದು, ಕುಡಿಯುಲು ಯೋಗ್ಯವಲ್ಲದಂತಾಗಿದೆ. ಈ ನೀರನ್ನು ಸೇವೆಸಿದಲ್ಲಿ ಅದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದು, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ಮುನಿಯಪ್ಪನದೊಡ್ಡಿ, ಮಲ್ಲಯ್ಯನದೊಡ್ಡಿ, ಲಾಳಾಘಟ್ಟ, ಮೆಹದಿ ನಗರ, ಅಹ್ಮದನಗರ, ಬೀಡಿಕಾಲೋನಿ ಸೇರಿದಂತೆ ಹಲವು ಗ್ರಾಮಗಳ ಜನ ಇದೇ ರಸ್ತೆಯಲ್ಲಿ ತಿರುಗಾಡಬೇಕು. ಆದರೆ, ಗಾಳಿ ಬಂದಂತೆ ಕಸ ಹಾರಾಡುವುದರಿಂದ ಸವಾರರಿಗೆ ಕಷ್ಟವಾಗಿದೆ. ಜೊತೆಗೆ ಕಸಕ್ಕೆ ಬೆಂಕಿ ಹಾಕುವುದರಿಂದ ಹೊರಹೊಮ್ಮು ಹೊಗೆಯಿಂದ ಉಸಿರು ಕಟ್ಟಿದಂತಾಗುತ್ತಿದೆ. ಮನೆಯಲ್ಲಿ ಇರುವುದೇ ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಈ ಕೂಡಲೇ ಇಲ್ಲಿ ಕಸ ಹಾಕುವುದನ್ನು ನಗರಸಭೆ ನಿಲ್ಲಿಸಿ ಪರ್ಯಾಯ ಜಾಗ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ತದನಂತರ, ನಗರಸಭೆಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net