ಪುಂಡಾನೆ ಅಲ್ಲವೇ ಅಲ್ಲ.. ಅದು ಪೀಚಾನೆ

19-cpt-3p
Published on

ಚನ್ನಪಟ್ಟಣ

ಕಾಡಂಚಿನ ಗ್ರಾಮಗಳಲ್ಲಿ ರೈತರು ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಪುಂಡಾನೆಗಳ ಸೆರೆಗೆ ಆರಂಭಿಸಿದ ಆಪರೇಷನ್ ತೆಂಗಿನಕಲ್ಲು ಕಾರ್ಯಚರಣೆಯ ಎರಡನೇಯ ಭಾಗ ಯಶಸ್ವಿಯಾಗಿದೆ.

ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಮತ್ತೊಂದು ಸಲಗವನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಶುಕ್ರವಾರ ಯಶಸ್ವಿಯಾಗಿದೆ. ಆದರೆ ಈ ಯಶಸ್ಸು ಸ್ಥಳೀಯರಿಗೆ ಖುಷಿ ಕೊಡಲೇ ಇಲ್ಲ, ಕಾರಣ, ಟಾರ್ಗೆಟ್ ಮಾಡಿದ್ದ ಆನೆಯೇ ಬೇರೆ ಸೆರೆ ಸಿಕ್ಕ ಆನೆಯೇ ಬೇರೆ.

ಆ 13 ರಂದು ಪುಂಡಾನೆಗಳ ಸೆರೆಗೆ ಕಾರ್ಯಚರಣೆ ಆರಂಭಿಸಲಾಗಿತ್ತು. ಆ.14 ರಂದು ಒಂದು ಮಖ್ನಾ ಆನೆಯನ್ನು ಸೆರೆಹಿಡಿಯುವಲ್ಲಿ ಕಾರ್ಯಚರಣೆಯ ತಂಡ ಯಶಸ್ವಿಯಾಗಿತ್ತು. ಇನ್ನೊಂದು ಪುಂಡಾನೆಯ ಸೆರೆಗೆ ಟಾರ್ಗೇಟ್ ಮಾಡಿಕೊಂಡ ತಂಡ ಆ ಆನೆಯ ಸೆರೆಗೆ ಬಲೆ ಬೀಸಿತ್ತು.

ಬುಧವಾರ ಪುಂಡಾನೆಯೊಂದನ್ನು ಗುರುತಿಸಿ ಅದಕ್ಕೆ ಅರವಳಿಕೆ ಮದ್ದು ಪ್ರಯೋಗಿಸಲಾಗಿತ್ತು. ಆದರೆ, ಅದು ನಿಗಧಿತ ಸಮಯಕ್ಕಿಂದ ಬೇಗ ಪ್ರಜ್ಞೆ ಬಂದು ಕಾಡಿನಲ್ಲಿ ತಪ್ಪಿಸಿಕೊಂಡಿತ್ತು. ಶುಕ್ರವಾರ ಆ ಒಂಟಿ ಸಲಗದ ಬೆನ್ನು ಹತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ರಾಮನಗರ ತಾಲೂಕಿನ ಕಾಡನಕುಪ್ಪೆ ಗ್ರಾಮದ ಸಮೀಪ ಇರುವ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಸಲಗವನ್ನು ಗುರುತಿಸಿದ್ದಾರೆ. ಕೂಡಲೇ ಅರವಳಿಕೆ ಮದ್ದನ್ನು ಬಂದೂಕಿನ ಸಹಾಯದಿಂದ ಆನೆಗೆ ನೀಡಿದ್ದಾರೆ. ಮದ್ದು ತಾಗುತ್ತಿದ್ದಂತೆ ಕೆಲ ನಿಮಿಷ ಅರಣ್ಯದಲ್ಲಿ ಸುತ್ತಾಡಿದ ಸಲಗ ಸುಮಾರು ಒಂದು ಕಿಮೀ ದೂರದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದು, ನಂತರ ಪ್ರಜ್ಞೆ ಬಂದ ಆನೆಯನ್ನು ಸ್ಥಳದಲ್ಲಿದ್ದ 5 ಸಾಕಾನೆಗಳು ಬಿ.ವಿಹಳ್ಳಿ ಗ್ರಾಮದ ಸಮೀಪ ನಿರ್ಮಿಸಿದ್ದ ತಾತ್ಕಾಲಿಕ ಆನೆ ಕ್ಯಾಂಪ್‌ಬಳಿಗೆ ಬಂದಿವೆ.

ಪುಂಡಾನೆಯಲ್ಲ, ಪೀಚಾನೆ:

ಶುಕ್ರವಾರ ಕಾಡಾನೆಯನ್ನು ಸೆರೆ ಹಿಡಿದು ಬಿವಿಹಳ್ಳಿಯ ತಾತ್ಕಾಲಿಕ ಆನೆ ಕ್ಯಾಂಪ್‌ಗೆ ಕರೆತಂದು ಲಾರಿಗೆ ಹತ್ತಿಸುತ್ತಿದಂತೆ ಸ್ಥಳದಲ್ಲಿ ಸ್ಥಳದಲ್ಲಿ ಜಮಾವಣೆಗೊಂಡ ಸಾರ್ವಜನಿಕರು ಇದು ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಅಲ್ಲವೇ ಅಲ್ಲ. ನೀವು ಬೇಕಾಬಿಟ್ಟಿ ಕಾರ್ಯಚರಣೆ ನಡೆಸಿ, ಹೆಸರಿಗೆ ಅಂಥ ಯಾವುದೋ ಸಣ್ಣ ಆನೆ ಹಿಡಿದಿದ್ದೀರಿ. ಜನರ ಕಣ್ಣೊರೆಸುವ ಉದ್ದೇಶದಿಂದ ಯಾವುದೋ ಸಣ್ಣ ಆನೆಯನ್ನು ಹಿಡಿದು ತಂದಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಗಳ ಜೊತೆ ಕೆಲಕಾಲ ಚರ್ಚಿಸಿ, ಮತ್ತೊಂದು ಆನೆಯನ್ನು ಸೆರೆಹಿಡಿಯುತ್ತೇವೆ. ಕ್ಯಾಂಪ್ ಅನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೆರೆ ಸಿಕ್ಕ ಆನೆಯನ್ನು ಸ್ಥಳಾಂತರಿಸಲು ಅವಕಾಶ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net