

*ಮೈತ್ರಿಯಲ್ಲಿ ಟಿಕೆಟ್ ದಂಗಲ್ *
ಕ್ಷೇತ್ರ ವಶಪಡಿಸಿಕೊಳ್ಳಲು ಡಿಕೆಶಿ ಕಸರತ್ತು * ಸಿಪಿವೈಗೆ ಎಚ್ಡಿಕೆ ಟಕ್ಕರ್?
ಗಂಗಾಧರ್ ಬೈರಾಪಟ್ಟಣ ರಾಮನಗರ
ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಹಲವು ತಿಂಗಳಿಂದಲೂ ಟಿಕೆಟ್ ವಿಚಾರವಾಗಿಯೇ ಸುದ್ದಿಯಲ್ಲಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಅಸಲಿ ಆಟ ಇಂದಿನಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಪಕ್ಷಗಳು ಹಾಗೂ ನಾಯಕರು ಸಿದ್ಧಗೊಂಡಿದ್ದಾರೆ.
ಕಳೆದ ಎರಡೂ ಚುನಾವಣೆಯಲ್ಲಿಯೂ ಜೆಡಿಎಸ್ ತೆಕ್ಕೆಗೆ ಜಾರಿದ್ದ ಕ್ಷೇತ್ರದ ಉಪ ಕದನದಲ್ಲಿ ಕಮಲ ಅರಳಿಸಿ ಅಸ್ತಿತ್ವ ಉಳಿಸಿಕೊಳ್ಳುವ ಯತ್ನದಲ್ಲಿ ಮಾಜಿ ಸಚಿವ ಯೋಗೇಶ್ವರ್ ಇದ್ದರೆ, ಇದಕ್ಕೆ ಮೈತ್ರಿ ಪಕ್ಷದ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸದ್ದಿಲ್ಲದೆ ಟಕ್ಕರ್ ಕೊಡುವ ಮೂಲಕ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎನ್ನುವ ಸಂದೇಶ ಸಾರಿರುವುದು ಮೈತ್ರಿಯಲ್ಲಿ ಟಿಕೆಟ್ ಗುದ್ದಾಟ ತಾರಕಕ್ಕೆ ಏರುವಂತೆ ಮಾಡಿದೆ.
ಮತ್ತೊಂದೆಡೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರವನ್ನು ಕೈವಶ ಮಾಡಿಕೊಂಡು ಪಕ್ಷಕ್ಕೆ ಅಸ್ತಿತ್ವ ಕೊಡಿಸುವ ಜತೆಗೆ ಮುಖ್ಯಮಂತ್ರಿ ಗದ್ದುಗೆ ಗುದ್ದಾಟದಲ್ಲಿ ಈ ಗೆಲುವನ್ನು ದಾಳವಾಗಿ ಬಳಸಿಕೊಳ್ಳುವಯತ್ನದಲ್ಲಿ ಇದ್ದಾರೆ. ಇದಕ್ಕಾಗಿ ಲೋಕಸಭೆ ಸಮರದ ನಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೈತ್ರಿಯಲ್ಲಿ ಮೂಡದ ಒಮ್ಮತ
ಚನ್ನಪಟ್ಟಣ ಕ್ಷೇತ್ರ ನಮಗೇ ಬೇಕು ಎನ್ನುವ ತಿಕ್ಕಾಟ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ನಡುವೆ ಲೋಕಸಭೆ ಚುನಾವಣೆ ನಂತರದಿಂದಲೂ ನಡೆಯುತ್ತಲೇ ಇದೆ. ಈ ಬಾರಿ ಟಿಕೆಟ್ ತಪ್ಪಿದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎನ್ನುವುದನ್ನು ಅರಿತಿರುವ ಯೋಗೇಶ್ವರ್ ಟಿಕೆಟ್ಗಾಗಿ ಸಾಧ್ಯ ಇರುವ ಎಲ್ಲ ಮಾರ್ಗಗಳನ್ನೂ ಬಳಕೆ ಮಾಡಿಕೊಂಡಿದ್ದಾರೆ. ಆದರೆ, ಸಿಪಿವೈಗೆ ಟಿಕೆಟ್ ನೀಡಿದರೆ ಜೆಡಿಎಸ್ ಪ್ರಾಬಲ್ಯ ಮರಳಿ ಪಡೆಯುವುದು ಕಷ್ಟ ಎನ್ನುವುದನ್ನು ಅರಿತಿರುವ ಕುಮಾರಸ್ವಾಮಿ ಹಾಗೂ ಸ್ಥಳಿಯ ಮುಖಂಡರು ಟಿಕೆಟ್ ನೀಡಿಕೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದರ ನಡುವೆ ನಿಖಿಲ್ ಸ್ಪರ್ಧೆಗೆ ಸಿದ್ಧತೆ ನಡೆದಿದ್ದು, ಅಧಿಕೃತವಾಗಿ ಘೋಷಣೆ ಆಗಬೇಕಿದೆ ಅಷ್ಟೇ ಎನ್ನುತ್ತವೆ ಜೆಡಿಎಸ್ ಮೂಲಗಳು.
ಕಾಂಗ್ರೆಸ್ ನಡೆಯೂ ನಿಗೂಢ
ಕ್ಷೇತ್ರದಲ್ಲಿ ಕೈ ಗೆಲುವಿನ ಮುದ್ರೆ ಒತ್ತುವ ಹಠಕ್ಕೆ ಬಿದ್ದಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಆರಂಭದಿಂದಲೂ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಯಾರೇ ಸ್ಪರ್ಧೆ ಮಾಡಿದರೂ ನಾನೇ ಸ್ಪರ್ಧಿಸಿದಂತೆ ಎಂದು ಹೇಳುವ ಮೂಲಕ ಟಿಕೆಟ್ ಕೌತುಕವನ್ನು ಹೆಚ್ಚಿಸಿದ್ದಾರೆ. ಈ ನಡುವೆ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆಯಾದರೂ, ನಮ್ಮ ಕುಟುಂಬದವರು ಯಾರೂ ಸ್ಪರ್ಧಿಸುವುದಿಲ್ಲ ಎಂದು ಡಿಕೆಶಿಯೇ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ ಬಿಎಂಐಸಿಪಿಐ ಅಧ್ಯಕ್ಷ ರುನಂದನ್ ರಾಮಣ್ಣ ಹೆಸರು ಪ್ರಬಲವಾಗಿ ಚಾಲ್ತಿಯಲ್ಲಿದೆ.
ಯಾರಿಗೂ ಸುಲಭವಲ್ಲ
ಮೈತ್ರಿ ಟಿಕೆಟ್ ಗುದ್ದಾಡ ಸುಖಾಂತ್ಯ ಕಂಡರೆ ಗೆಲುವಿನ ರೇಸ್ನಲ್ಲಿ ಎನ್ಡಿಎ ಅಭ್ಯರ್ಥಿ ಮುಂದೆ ಇರಲಿದ್ದಾರೆ. ಒಂದು ವೇಳೆ ಹಗ್ಗ ಜಗ್ಗಾಟ ನಡೆದು ಯೋಗೇಶ್ವರ್ಗೆ ಟಿಕೆಟ್ ತಪ್ಪಿದರೆ ಖಂಡಿತವಾಗಿ ಇಲ್ಲಿ ಗೆಲುವು ಯಾರಿಗೂ ಸುಲಭವಲ್ಲ. ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ, ಯೋಗೇಶ್ವರ್ ಬೆಂಬಲವೂ ದೊರೆತರೆ ಗೆಲುವಿನ ಅವಕಾಶ ಹೆಚ್ಚಿರುತ್ತದೆ. ಒಂದು ವೇಳೆ ಯೋಗೇಶ್ವರ್ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಖಂಡಿತವಾಗಿ ಇದು ಮೈತ್ರಿಗೆ ಕಷ್ಟವಾಗಲಿದೆ.
ಎಲ್ಲರಿಗೂ ಅಸ್ತಿತ್ವದ ಪ್ರಶ್ನೆ
* ಕ್ಷೇತ್ರದಲ್ಲಿ ಸೋತರೆ ಕೇಂದ್ರ ಮಟ್ಟದಲ್ಲಿ ಕುಮಾರಸ್ವಾಮಿ ಪ್ರಾಬಲ್ಯ ಕಳೆದುಕೊಳ್ಳಬಹುದು. ಇಲ್ಲಿನ ಗೆಲುವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಚ್ಡಿಕೆ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ.
* ಡಿ.ಕೆ.ಶಿವಕುಮಾರ್ಗೆ ತವರು ಜಿಲ್ಲೆಯಲ್ಲಿ ಗೆಲುವಿನ ನಗೆ ಬೀರುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ.
* ಯೋಗೇಶ್ವರ್ ರಾಜಕೀಯ ಭವಿಷ್ಯ ಈ ಚುನಾವಣೆ ಸೋಲು ಗೆಲುವಿನ ಮೇಲಿಯೇ ನಿರ್ಧಾರವಾಗಲಿದೆ.
ಮುಸ್ಲಿಂ ಮತಗಳ ಓಲೈಕೆ
ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,24,886 ಮತದಾರರಿದ್ದಾರೆ. ಇವರಲ್ಲಿ 1,09,133 ಪುರುಷ ಮತ್ತು 1,15,753 ಮಹಿಳಾ ಮತದಾರರಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು ಪ್ರಬಲರಾಗಿದ್ದರೂ ಸ್ಪರ್ಧಿಗಳು ಒಕ್ಕಲಿಗರೇ ಆಗಿರುವುದು ಈ ಸಮುದಾಯದ ಮತಗಳು ಹಂಚಿಕೆ ಆಗಲಿವೆ. ಸುಮಾರು 24 ಸಾವಿರಕ್ಕೂ ಹೆಚ್ಚಿರುವ ಮುಸ್ಲಿಂ ಮತದಾರರ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಒಂದು ವೇಳೆ ಯೋಗೇಶ್ವರ್ ಸ್ಪರ್ಧೆ ಮಾಡಿದರೆ ಖಂಡಿತವಾಗಿ ಇದು ಕಾಂಗ್ರೆಸ್ಗೆ ಪ್ಲಸ್ ಆಗಲಿದೆ. ಕ್ಷೇತ್ರದಲ್ಲಿ ದಲಿತರು 50 ಸಾವಿರದಷ್ಟು, ಲಿಂಗಾಯತರು 10 ಸಾವಿರ, ತಿಗಳರು 8500 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ.
2018 ಚುನಾವಣೆ ಫಲಿತಾಂಶ
ಹೆಸರು ಪಕ್ಷ ಮತಗಳು
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 87995
ಸಿ.ಪಿ ಯೋಗೇಶ್ವರ್ ಬಿಜೆಪಿ 66465
ಎಚ್.ಎಂ.ರೇವಣ್ಣ ಕಾಂಗ್ರೆಸ್ 30208
2023 ವಿಧಾನಸಭೆ ಚುನಾವಣೆ
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 96592
ಸಿ.ಪಿ.ಯೋಗೇಶ್ವರ್ ಬಿಜೆಪಿ 80677
ಎಸ್.ಗಂಗಾಧರ್ ಕಾಂಗ್ರೆಸ್ 15374