

ಚನ್ನಗಿರಿ: ಕಳೆದೊಂದು ವಾರದಿಂದ ಕಣ್ಮರೆಯಾಗಿದ್ದ ಮಳೆರಾಯ ಸೋಮವಾರ ರಾತ್ರಿ ಮತ್ತೆ ಕಾಣಿಸಿಕೊಂಡ. ತಾಲೂಕಿನ ವಿವಿಧ ಕಡೆಗಳಲ್ಲಿ ದಿಢೀರ್ ಮಳೆ ಸುರಿಯಿತು.
ದಿಗ್ಗೇನಹಳ್ಳಿ, ಲಕ್ಷ್ಮೀಸಾಗರ, ಅಜ್ಜಿಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ತೋಟಗಳಲ್ಲಿ ಹಳ್ಳದ ರೀತಿಯಲ್ಲಿ ನೀರು ಹರಿಯಿತು.
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಬಂದ ಕಾರಣ ಗ್ರಾಮದ ರಸ್ತೆಗಳಲ್ಲಿ ತುಂಬಿ ಹರಿದವು. ಪಟ್ಟಣದ ಹರಿದ್ರಾವತಿ ನದಿಯಲ್ಲಿ ಬೆಳಗಿನ ಜಾವದವರೆಗೆ ನೀರು ಹರಿಯಿತು. ಚನ್ನಗಿರಿ ಸುತ್ತ 38.3 ಮಿಮೀ ನಷ್ಟು ಮಳೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.