ಹಬ್ಬಗಳ ಆಚರಣೆ ಸಾರಲಿವೆ ಸಾಮರಸ್ಯ

CHN DHARMIKA
Published on

ಚನ್ನಗಿರಿ: ಧಾರ್ವಿುಕ ಕಾರ್ಯಕ್ರಮಗಳಲ್ಲಿ ಸಮುದಾಯದವರು ದ್ವೇಷ, ಅಸೂಯೆ ಮರೆತು ಸಂಘಟಿತರಾಗಬೇಕು. ಎಲ್ಲರೂ ಸೇರಿ ಮಾಡುವ ಹಬ್ಬ, ಜಾತ್ರೆಗಳು ಸಮಾಜಕ್ಕೆ ಸಾಮರಸ್ಯದ ಸಂದೇಶ ನೀಡಲಿವೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ತಿಳಿಸಿದರು.

ನಗರದೇವತೆ ಶ್ರೀ ಕುಕ್ಕುವಾಡ ಅಂಬಾಭವಾನಿ ಅಮ್ಮನವರ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ವಿುಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವರ ಹೆಸರಿನಲ್ಲಿ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವ ಆಚರಣೆ ನಮ್ಮ ಪ್ರಮುಖ ಪರಂಪರೆಯಾಗಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಸೇರುವ ಸಂಬಂಧಿಕರು, ಸ್ನೇಹಿತರು, ಸಮಾಜದವರಲ್ಲಿ ಜಾತ್ರೆಯು ನೆಮ್ಮದಿ ತರಲಿದೆ ಎಂದು ತಿಳಿಸಿದರು.

ಮನುಷ್ಯ ಅಹಂಕಾರ ಬಿಡಬೇಕು. ಪ್ರಾಣಿ ಬಲಿಯಂತಹ ಆಚರಣೆಗಳು ನಿಲ್ಲಬೇಕು. ಹಬ್ಬಗಳಲ್ಲಿ ಅತಿಯಾಗಿ ಖರ್ಚು ಮಾಡದೇ ಇರುವುದರಲ್ಲಿಯೇ ಆಚರಿಸಿ ಸಂತೋಷ ಪಡಬೇಕು ಎಂದರು.

ತುಮ್ೋಸ್ ಅಧ್ಯಕ್ಷ ಆರ್.ಎಂ. ರವಿ ಮಾತನಾಡಿ, ಹಬ್ಬ ಎಲ್ಲರನ್ನೂ ಒಂದುಗೂಡಿಸುತ್ತದೆ. ವರ್ಷವೆಲ್ಲ ದುಡಿದು ಕೆಲಸ ಮಾಡಿದ ಮನಸ್ಸುಗಳಿಗೆ ನೆಮ್ಮದಿ ಹೊಂದಲು ಜಾತ್ರೆ, ಕಾರ್ತಿಕೋತ್ಸವದಂತಹ ಸಮಾರಂಭಗಳು ನೆರವಾಗುತ್ತವೆ. ತಾಂತ್ರಿಕತೆ ಕಾಲದಲ್ಲೂ ಈ ಸಂಪ್ರದಾಯ ಮುಂದುವರಿಸಬೇಕಿದೆ ಎಂದು ಹೇಳಿದರು.

ಹೊದಿಗೆರೆಯ ಶ್ರೀ ಷಹಾಜಿರಾಜೇ ಬೋಸ್ಲೆ ಸ್ಮಾರಕ ಸಮಿತಿ ಕಾರ್ಯದರ್ಶಿ ವೈ.ಎಂ. ರಾಮಚಂದ್ರರಾವ್ ಮಾತನಾಡಿ, ದೇವರ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಒಂದೇ. ಜಾತ್ರೆ-ಹಬ್ಬಗಳಲ್ಲಿ ಜಾತಿ, ಧರ್ಮ ಮರೆತು ಸಹೋದರರಂತೆ ಇದ್ದಾಗ ಕಲಹ, ಗಲಾಟೆಗಳಿಗೆ ಅವಕಾಶವಿಲ್ಲ ಎಂದರು.

ಶ್ರೀಷಹಾಜಿರಾಜೇ ಬೋಸ್ಲೆ ಅಭಿವೃದ್ಧಿ ಸ್ಮಾರಕ ಸಮಿತಿ ಅಧ್ಯಕ್ಷ ವೈ. ಮಲ್ಲೇಶ್, ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್, ಉಪಾಧ್ಯಕ್ಷ ಬಿ.ಎಂ. ಕುಬೇಂದ್ರೋಜಿರಾವ್, ಖಜಾಂಚಿ ಅಣ್ಣೋಜಿರಾವ್ ಪವಾರ್, ಗೌರವಾಧ್ಯಕ್ಷ ಎಂ.ಎಂ. ಮಂಜುನಾಥ್ ಜಾಧವ್, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಲತಾ ಮಂಜೋಜಿರಾವ್ ಮತ್ತು ಪುರಸಭೆಯ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net