

ಹೊನ್ನಾಳಿ: ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ರಾಂಪುರ ಗ್ರಾಮದ ಹೊರವಲಯದಲ್ಲಿ ಅಲೆಮಾರಿ ಗೊಲ್ಲರ ಕುರಿ ಹಿಂಡಿನ ಮೇಕೆ ಮರಿಯೊಂದನ್ನು ಚಿರತೆಯೊಂದು ಶುಕ್ರವಾರ ಕೊಂದಿದ್ದು, ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೋಳದ ಹೊಲದ ಪಕ್ಕದಲ್ಲಿ ಕುರಿ ಮೇಯಿಸುತ್ತಿರುವಾಗ ಕುರಿ ಹಿಂಡಿನ ಮೇಲೆ ದಾಳಿ ಮಾಡಿದ ಚಿರತೆ ಮೇಕೆ ಮರಿಯನ್ನು ಹಿಡಿದು ಹೊತ್ತೊಯ್ಯುವ ಪ್ರಯತ್ನ ಮಾಡಿದೆ. ಆಗ ಕುರಿಗಾಹಿ ಕೇಕೆ ಹಾಕಿದ್ದರಿಂದ ಚಿರತೆ ಮರಿಯನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದು, ಮೇಕೆ ಮರಿ ಮೃತಪಟ್ಟಿದೆ.
ಕಳೆದ ವಾರ ಚಿಕ್ಕಬಾಸೂರು ತಾಂಡ (ವಿಜಯಪುರ) ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತು ಎಂಬ ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಗ್ರಾಮದ ಹೊರಗೆ ಬೋನು ಇರಿಸಿತ್ತು. ಇದೀಗ ಆ ಚಿರತೆಯೇ ರಾಂಪುರ ಗ್ರಾಮದ ಹೊರವಲಯದಲ್ಲಿ ಗುರುವಾರ ಮೇಕೆ ಮರಿಯ ಬೇಟೆ ಆಡಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.