ಚನ್ನಗಿರಿಯಲ್ಲಿ ಅರಣ್ಯ ಇಲಾಖೆ ನೋಟಿಸ್ ಸುಟ್ಟ ರೈತರು

51
Published on

ಚನ್ನಗಿರಿ: ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು ತೆರವುಗೊಳಿಸಲು ಅರಣ್ಯ ಇಲಾಖೆ ದಾಖಲೆ ಕೇಳಿ ನೋಟಿಸ್ ಜಾರಿ ಮಾಡಿರುವುದು ರೈತರನ್ನು ಒಕ್ಕಲೆಬ್ಬಿಸುವಂಥ ಕೆಲಸ. ರೈತರ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾಯಕರ್ತರು ಶನಿವಾರ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ನೋಟಿಸ್ ಸುಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನಗಾರರು ಪಟ್ಟಣದ ಪ್ರವಾಸಿ ಮಂದಿರ ಬಳಿ ವಾಹನ ತಡೆದು ಮಾನವ ಸರಪಳಿ ರಚಿಸಿದ ನಂತರ ಅರಣ್ಯ ಇಲಾಖೆಗೆ ತೆರಳಿ ಅಧಿಕಾರಿಗಳು ಬರುವವರೆಗೆ ಪ್ರತಿಭಟಿಸಿದ ಕಾರಣ ಮೂರು ತಾಸಿಗೂ ಅಧಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಚನ್ನಗಿರಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಕಂದಾಯ ಇಲಾಖೆ ವ್ಯಾಪ್ತಿಯ ಹುಲ್ಲುಬಾವಿ ದನಗಳ ಮುಪ್ಪತ್ತು ಗೋಮಾಳ ಸೇರಿದಂತೆ ಸಿ, ಡಿ ವರ್ಗದ ಭೂಮಿಯಲ್ಲಿ ಬಡ ರೈತರು ಸಾಗುವಳಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಸರ್ಕಾರ ಭೂಮಿಯನ್ನು ಜಂಟಿ ಸಮೀಕ್ಷೆ ನಡೆಸದೆ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ದಾಖಲೆ ನೀಡುವಂತೆ ಅರಣ್ಯ ಇಲಾಖೆ ರೈತರಿಗೆ ನೀಡಿದೆ. ಈ ಕ್ರಮ ಸರಿಯಲ್ಲ, ಮೊದಲು ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತರು ಸಾಗುವಳಿ ಮಾಡುವಂಥ ಜಮೀನುಗಳಿಗೆ ಹಕ್ಕುಪತ್ರ ನೀಡುವಂತೆ ಈ ಹಿಂದೆ ನಮೂನೆ 50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಸಂಬಂಧಿತ ಇಲಾಖೆಗಳಲ್ಲಿ ರೈತರು ನೀಡಿರುವ ಅರ್ಜಿಗಳ ವಿಲೇವಾರಿ ಈವರೆಗೆ ಆಗಿರುವುದಿಲ್ಲ. 2015ಕ್ಕಿಂತ ಮುಂಚಿತವಾಗಿ ಸಾಗುವಳಿ ಮಾಡಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಪ್ರತಿದಿನ ರೈತರು ಭಯದಲ್ಲಿ ಬದುಕುತ್ತಿದ್ದಾರೆ. ಸರ್ಕಾರ ಅರಣ್ಯ ಇಲಾಖೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಕಾಳೇಶ್, ತಾಲೂಕು ಹಸಿರುಸೇನೆ ಅಧ್ಯಕ್ಷ ಬಸವಾಪುರ ರಂಗಾನಾಥ್, ಉಪಾಧ್ಯಕ್ಷ ಸಂತೋಷ್ ದಾಗಿನಕಟ್ಟೆ, ಕುಬೇಂದ್ರಸ್ವಾಮಿ, ಕಾನೂನು ಸಲಹೆಗಾರ ಪಾಟೀಲ್, ಜಿಲ್ಲಾ ಮುಖಂಡ ಸುರೇಶ್ ದಾಗಿನಕಟ್ಟೆ, ಬಸವರಾಜ್ ದಾಗಿನಕಟ್ಟೆ, ರಾಜ್ಯ ಸಂಚಾಲಕ ಚೇತನಕುಮಾರ್, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net