

ಹಿರೇಕೆರೂರ: ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ಸರ್ವಜ್ಞ ವೃತ್ತದಲ್ಲಿ ಗುರುವಾರ ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ವಿಜಯೋತ್ಸವ ಆಚರಿಸಿದರು.
ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಂದು ಜಗತ್ತೆ ಕೊಂಡಾಡುತ್ತಿದ್ದು, ಭಾರತ ಇಂದು ವಿಶ್ವದಲ್ಲಿಯೇ ತನ್ನ ಅಘಾದ ಶಕ್ತಿ ಪ್ರದರ್ಶಿಸಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಚಂದ್ರನ ಅಂಗಳದಲ್ಲಿ ಭಾರತದ ಸಾಧನೆಯನ್ನು ಜಗತ್ತಿಗೆ ತೋರಿಸಿದೆ. ವಿಜ್ಞಾನಿಗಳ ದಶಕಗಳ ಶ್ರಮದ ಫಲವಾಗಿ ಆ. 23ರಂದು ಸಂಜೆ 6 ಗಂಟೆಗೆ ಇಡೀ ಜಗತ್ತು ತನ್ನ ದೃಷ್ಟಿಯನ್ನು ಭಾರತದತ್ತ ಹರಿಸಿದ್ದು, ಭಾರತದ ತಾಕತ್ತನ್ನು ಎತ್ತಿ ತೋರಿಸಿದೆ. ಇಂದಿನ ವಿದ್ಯಾರ್ಥಿಗಳು ಹಿಂದೆಂದೂ ಕಾಣದಂತಹ ವಿಸ್ಮಯಗಳನ್ನು ಮನೆಯಲ್ಲಿಯೇ ಕುಳಿತು ನೋಡುವಂತಹ ಅವಕಾಶ ಸಿಕ್ಕಿದ್ದು ಭಾರತೀಯರ ಭಾಗ್ಯ ಎಂದರು.
ಪ್ರಾಚಾರ್ಯರಾದ ಡಾ.ಎಸ್.ಬಿ. ಚನ್ನಗೌಡ್ರ, ಬಿ.ಪಿ. ಹಳ್ಳೇರ, ಕೆ.ಆರ್. ಲಮಾಣಿ, ಮುಖ್ಯ ಶಿಕ್ಷಕರಾದ ಕೆ.ಎಂ. ಸುಕುಕುಮಾರ, ಆರ್.ಎಂ. ಪೂಜಾರ, ಬಿ.ವಿ. ಸನ್ನೇರ, ಶಿಕ್ಷಕರು, ಉಪನ್ಯಾಸಕರಾದ ಪಿ.ಎಂ. ಡಮ್ಮಳ್ಳಿ, ಎಂ.ಜಿ. ಕಡದಕಟ್ಟಿ, ಕೆ.ಎಚ್. ಮಾವಿನತೋಪ, ಎಸ್.ಸಿ. ಬಸರೀಹಳ್ಳಿ, ಸಿ.ಎಸ್. ಮರಿಗೂಳಪ್ಪನವರ, ಸತೀಶ.ಬಣಕಾರ ಹಾಗೂ ಸಹಸ್ರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.
ದೈಹಿಕ ಶಿಕ್ಷಕ ಆರ್.ಎಂ. ಕರೇಗೌಡ್ರ ನಿರ್ವಹಿಸಿದರು.