

ಬೆಂಗಳೂರು: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಐತಿಹಾಸಿಕ ಕ್ಷಣವನ್ನು ನಗರದ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ನೂರಾರು ಮಂದಿ ಕಣ್ತುಂಬಿಕೊಂಡರು.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಸಂದರ್ಭದ ಕೌತುಕವನ್ನು ವೀಕ್ಷಿಸಲು ತಾರಾಲಯದ ಆವರಣದಲ್ಲಿ ಎರಡು ಬೃಹತ್ ಪರದೆಗಳಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಇಸ್ರೋ ವಿಜ್ಞಾನಿಗಳು ಹೇಳಿದಂತೆ ನಿಗದಿತ ಸಮಯಕ್ಕೆ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶಿಸುತ್ತಲೇ ನೆರೆದಿದ್ದವರ ಕರತಾಡನ ಮುಗಿಲು ಮುಟ್ಟಿತು. ಪುಟ್ಟ ಮಕ್ಕಳು ತಮ್ಮ ಒಂದು ಕೆನ್ನೆಯ ಮೇಲೆ ತ್ರಿವರ್ಣ ಧ್ವಜ, ಮತ್ತೊಂದು ಕೆನ್ನೆಯ ಮೇಲೆ ಇಸ್ರೋ ಲೋಗೋ ಬರೆಸಿಕೊಂಡು, ರಾಷ್ಟ್ರಧ್ವಜ ಹಿಡಿದು ಜೈ ಭಾರತ್, ಜೈ ಇಸ್ರೋ ಎಂದು ಜೈಕಾರ ಕೂಗಿ ದೇಶ ಪ್ರೇಮ ಮರೆದರು.
ಜಮಾಯಿಸಿದ್ದ ಜನ: ಚಂದ್ರಯಾನ-3ರ ಯಶಸ್ಸನ್ನು ಕಣ್ತುಂಬಿಕೊಳ್ಳಲು ನಗರದ ನಾನಾ ಭಾಗಗಳಿಂದ ಮಧ್ಯಾಹ್ನವೇ ನೆಹರು ತಾರಾಲಯಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ವಿದ್ಯಾರ್ಥಿಗಳೊಂದಿಗೆ ಕುಳಿತು ಚಂದ್ರ ಹಾಗೂ ಸೌರಮಂಡಲದ ಕೌತುಕವನ್ನು ವೀಕ್ಷಿಸಿದರು. ತಾರಾಲಯದ ದ್ವಾರಗಳಲ್ಲಿ ಅಳವಡಿಸಿದ್ದ ಚಂದ್ರಯಾನ ಹಾಗೂ ಅದರ ಸಂಚಾರ, ವಿನ್ಯಾಸ ಕುರಿತ ಲಕಗಳನ್ನು ಓದಿ ಮಾಹಿತಿ ತಿಳಿದುಕೊಂಡರು. ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಸಂಬಂಧ ನೇರ ಪ್ರಸಾರ ವೀಕ್ಷಿಸುತ್ತಿದ್ದವರಿಗೆ ಇಸ್ರೋದಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನಿ ಡಾ. ಗುರುಪ್ರಸಾದ್ ಕನ್ನಡದಲ್ಲಿ ವಿವರಣೆ ನೀಡಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಳಕ್ಕೆ ಯೋಜನೆ: ರಾಜ್ಯದಲ್ಲಿ ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳು, ಎರಡು ತಾರಾಲಯಗಳು, 8 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ. 11 ಸಂಚಾರಿ ತಾರಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ನೂತನ ಯೋಜನೆ ಜಾರಿಗೊಳಿಸಲು ಚಿಂತನೆ ನಡೆದಿದೆ. ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್‌ಗಳನ್ನು ನೀಡುವುದರ ಜತೆಗೆ ಈ ಉಪಕರಣಗಳ ನಿರ್ವಹಣೆ ಮತ್ತು ಅವುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ತಿಳಿಸಲು ಶಿಕ್ಷಕರಿಗೆ ತರಬೇತಿ ನೀಡಲು ಯೋಚಿಸಲಾಗಿದೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಇದೊಂದು ಐತಿಹಾಸಿಕ ಮೈಲಿಗಲ್ಲು. ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಮುಂದಿನ 14 ದಿನಗಳ ಕಾಲ ಚಂದ್ರನ ಮೇಲ್ಮೈನ ಅಧ್ಯಯನ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುವೆ ಎಂದರು.