ಚಾಮುಂಡೇಶ್ವರಿ ಕರಗ ಮಹೋತ್ಸವ ಸಂಪನ್ನ

karaga 111111
Published on

ರಾಮನಗರ: ನಗರದ ಐತಿಹಾಸಿಕ ಚಾಮುಂಡೇಶ್ವರಿ ದೇವರ ಕರಗ ಅಗ್ನಿಕೊಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಒಂಬತ್ತು ಶಕ್ತಿ ದೇವತೆಗಳ ಕರಗ ಆಷಾಢ ಮಾಸದ ಬುಧವಾರ ತೆರೆಬಿದ್ದಿತ್ತು.

ಚಾಮುಂಡೇಶ್ವರಿ ಕರಗ ಮಹೋತ್ಸವದ ಜತೆಯಲ್ಲಿ ತೋಪ್​ಖಾನ್​ ಮೊಹಲ್ಲಾ ಮುತ್ತು ಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಶೆಟ್ಟಿಹಳ್ಳೀಬಿದಿ ಆದಿಶಕ್ತಿ, ಐಜೂರು ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ, ಅರ್ಕೇಶ್ವರ ಕಾಲನಿ ಚೌಡೇಶ್ವರಿ ದೇವಿ ಕರಗ, ಮಂಜುನಾಥ ನಗರದ ಹಳೇವೂರಮ್ಮ ಕರಗ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನಜಾವದವರೆಗೂ ನಡೆದವು. ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.

ವಿಶೇಷ ಅಲಂಕಾರ: ಕರಗಕ್ಕೆ ವಿಶೇಷವಾಗಿ ಮಲ್ಲಿಗೆ ಹೂವು ಹಾಗೂ ಕರಗ ಬರುವ ದಾರಿಯಲ್ಲಿ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಜನರು ಮನೆ ಮುಂಭಾಗ ಕರಗಕ್ಕೆ ಪೂಜೆ ಮಾಡಿ ಸ್ವಾಗತಿಸಿದರು. ಅಗ್ನಿಕೊಂಡ ಹಾಯುವವರೆಗೂ ಕರಗ ಹೂವಿನ ಮೇಲೆ ಸಾಗಿದ್ದು ವಿಶೇಷವಾಗಿತ್ತು.

ಕರಗ ಸಂಚಾರ ಮಾರ್ಗ: ಚಾಮುಂಡೇಶ್ವರಿ ಕರಗ ನಗರದ ಸಿಂಗ್ರಾಬೋವಿ ದೊಡ್ಡಿಯಿಂದ ಹೊರಟು ಎಂ.ಜಿ. ರಸ್ತೆ, ಐಜೂರು, ಮಂಡೀಪೇಟೆ, ಬಾಲಗೇರಿ, ಗಾಂಧಿನಗರ, ಚಾಮುಂಡಿಪುರ, ರಾಯರದೊಡ್ಡಿ ಸರ್ಕಲ್​, ವಿವೇಕಾನಂದನಗರ, ವಿನಾಯಕನಗರ, ವಿಜಯನಗರ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಕರಗ ಸಂಚರಿಸಿತು. ಬುಧವಾರ ಬೆಳಗ್ಗೆ ಕರಗ ಮೆರವಣಿಗೆ ದೇವಾಲಯಕ್ಕೆ ಬಂದಿತು. ಕರಗಹೊತ್ತ ದೇವಿಪ್ರಸಾದ್​ ಸಿಂಗ್​ ಬಾಬು 26ನೇ ಭಾರಿ ಕರಗಧಾರಕರಾಗಿ ಸಾವಿರಾರು ಜನರ ಜೈಕಾರದೊಡನೆ ಅಗ್ನಿಕೊಂಡ ಹಾಯ್ದರು.

ಜನಜಂಗುಳಿ: ದೇವಾಲಯ ಸುತ್ತಮುತ್ತಲ ಕಟ್ಟಡಗಳ ಮೇಲೆ ಜನರು ನಿಂತು ಕರಗಕ್ಕೆ ಹೂಮಳೆ ಸುರಿಸಿ ಜೈ ಚಾಮುಂಡೇಶ್ವರಿ ಎಂದು ಹೇಳುತ್ತಾ ಅಗ್ನಿಕೊಂಡ ಮಹೋತ್ಸವ ಕರಗ ಮಹೋತ್ಸ ಕಂಡು ಕಣ್ತುಂಬಿಕೊಂಡರು.

ಕರಗ ಮೆರವಣಿಗೆ ಬರುತ್ತಲೇ ಬೀದಿಗಳಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ರಾಮನಗರ, ಐಜೂರು, ಸಂಚಾರ ಪೊಲೀಸರು ಕರಗ ಸಂಚರಿಸುವ ಸ್ಥಳಗಳಲ್ಲಿ ಸೂಕ್ತ ಪೊಲೀಸ್​ ಭದ್ರತೆ ಒದಗಿಸಿದ್ದರು.

ಚಾಮುಂಡೇಶ್ವರಿ ದೇವಾಲಯಕ್ಕೆ ಮಂಗಳವಾರ ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್​, ಮಾಜಿ ಸಂಸದ ಡಿ.ಕೆ. ಸುರೇಶ್​, ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​, ಮಾಜಿ ಶಾಸಕ ಕೆ. ರಾಜು, ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್​ಕುಮಾರ್​, ಮಾಜಿ ಅಧ್ಯಕ್ಷ ಸಿ.ಎನ್​.ಆರ್​. ವೆಂಕಟೇಶ್​ ಇತರರು ಭೇಟಿ ನೀಡಿದರು.

ಮನರಂಜನಾ ಕಾರ್ಯಕ್ರಮ: ಜಿಲ್ಲಾ ಕ್ರೀಡಾಂಗಣದಲ್ಲಿ ಕರಗ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಂಗೀತ ರಸಸಂಜೆ ಮತ್ತು ಆಟೋಟ ಮನರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಆಗಮಿಸಿದ್ದರು. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನಜಾವದವರೆಗೂ ನಗರದ ಎಂ.ಜಿ. ರಸ್ತೆ, ಮುಖ್ಯರಸ್ತೆ, ಬೆಂಗಳೂರು ಮೈಸೂರು ಹೆದ್ದಾರಿ ಸೇರಿ ನಗರದ ಇತರ ರಸ್ತೆಗಳು ಜನರಿಂದ ತುಂಬಿ ತುಳುಕಿತು. ಜಿಲ್ಲೆಯ ಮಾಗಡಿ, ಕನಕಪುರ, ಬಿಡದಿ, ಹಾರೋಹಳ್ಳಿ, ಚನ್ನಪಟ್ಟಣ, ಕನಕಪುರ, ಸೇರಿದಂತೆ ಬೆಂಗಳೂರು, ಮಂಡ್ಯ ಭಾಗಗಳಿಂದಲೂ ಜನರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net