ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕದ್ದಿದ್ದು ವೈದ್ಯೆಯೇ! ವರ್ಷದ ಹಿಂದಿನ ಪ್ರಕರಣವನ್ನು ಬೇಧಿಸಿದ ಪೊಲೀಸರು

baby
Published on

ಬೆಂಗಳೂರು: ಕಳೆದ ವರ್ಷ ನಗರದ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನವಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ವೈದ್ಯೆಯೇ ಈ ಕಳ್ಳತನ ಮಾಡಿರುವ ವಿಚಾರ ಇದೀಗ ಹೊರಗೆ ಬಿದ್ದಿದೆ.

2020ರ ಮೇ 29ರಂದು ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿತ್ತು. ಆಗಲೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ರೇಖಾ ಚಿತ್ರ ರಚಿಸಿ ಹುಡುಕಲಾರಂಭಿಸಿದ್ದರು. 2021ರ ಮೇ 29ಕ್ಕೆ ಸರಿಯಾಗಿ ಆರೋಪಿ ಸಿಕ್ಕಿಬಿದ್ದಿದ್ದಾಳೆ. ತಲಘಟ್ಟಪುರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಉತ್ತರ ಕರ್ನಾಟಕ ಮೂಲದ ಮನೋವೈದ್ಯೆಯೊಬ್ಬರು ಬುದ್ಧಿ ಮಾಂದ್ಯತೆಯಿಂದ ಕೂಡಿದ್ದ ಮಗುವೊಂದಕ್ಕೆ ಚಿಕಿತ್ಸೆ ಕೊಡುತ್ತಿದ್ದಳಂತೆ. ಆ ಮಗುವಿನ ದಂಪತಿ ಇನ್ನೊಂದು ಮಗುವಿಗಾಗಿ ಪ್ರಯತ್ನ ಪಟ್ಟರೂ ಮಗುವಾಗಿರಲಿಲ್ಲ. ಅದೇ ಕಾರಣಕ್ಕೆ ಅವರಿಬ್ಬರ ಅಂಡಾಣು ಮತ್ತು ವೀರ್ಯಾಣುವನ್ನು ಪಡೆದಿದ್ದ ವೈದ್ಯೆ ಅದನ್ನು ಬೇರೊಬ್ಬ ಮಹಿಳೆಯ ಗರ್ಭಕ್ಕೆ ಸೇರಿಸಿ ಮಗುವನ್ನು ಬೆಳೆಸುವುದಾಗಿ ಹೇಳಿದ್ದಳು. ಅದರಂತೆ ತಾನು ಮಾಡಿದ್ದು ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದೂ ನಂಬಿಸಿದ್ದಳು.

ಅದಾದ ನಂತರ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಆಟೋದಲ್ಲಿ ಬಂದ ವೈದ್ಯೆ ಮಗುವನ್ನು ಕದ್ದು ಪರಾರಿಯಾಗಿದ್ದಳು. ಆ ಮಗುವನ್ನು ದಂಪತಿಗೆ ಕೊಟ್ಟು 15 ಲಕ್ಷ ರೂಪಾಯಿಯನ್ನು ಪಡೆದಿದ್ದಳು ಎನ್ನಲಾಗಿದೆ. ಇದೀಗ ಪೊಲೀಸರ ತಂಡ ಮಗುವನ್ನು ವಾಪಸು ಕರೆತಂದಿದ್ದಾರೆ. ತಲಘಟ್ಟಪುರ ಪಿಎಸ್ಐ ಶ್ರೀನಿವಾಸ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net