

ಚಾಮರಾಜನಗರ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಸೂಕ್ತ ತೀರ್ಮಾನವಲ್ಲ ಎಂದು ಕೊಳ್ಳೇಗಾಲದ ಉಚ್ಛಾಟಿತ ಬಿಎಸ್ಪಿ ಶಾಸಕ ಎನ್ ಮಹೇಶ್ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ಕರೊನಾ ಹಾಗೂ ಪ್ರವಾಹ ಎಲ್ಲವನ್ನೂ ಸೂಕ್ತವಾಗಿ ನಿರ್ವಹಣೆ ಮಾಡುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಇಡೀ ರಾಜ್ಯದ ಬಗ್ಗೆ ಬಿ.ಎಸ್.ಯಡಿಯೂರಪ್ಪನವರಿಗೆ ಮಾಹಿತಿ ಇದೆ. 45 ವರ್ಷಗಳ ರಾಜಕೀಯ ಜೀವನದಲ್ಲಿ ಚಾಮರಾಜನಗರದಿಂದ-ಬೀದರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮಾಹಿತಿ ಇದೆ. ಇಂತಹ ಅನುಭವಿಯನ್ನ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದರು.
ಅವರಿಗೆ ವಯಸ್ಸಾಗಿದೆ ಎಂದು ತುಂಬಾ ಜನ ಮಾತನಾಡುತ್ತಾರೆ. ನನಗಂತೂ ಹಾಗೇ ಅನ್ನಿಸಿಲ್ಲ. ಅವರು ಆರೋಗ್ಯವಾಗಿದ್ದಾರೆ ಮತ್ತು ಬಹಳ ಬುದ್ಧಿವಂತರಿದ್ದಾರೆ. ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)