

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕೊನೆಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೌನ ಮುರಿದಿದ್ದಾರೆ.
ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ, ನಾನು ಹೈಕಮಾಂಡ್ ಹೇಳಿದಂತೆ ಕೇಳುವೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರು ನನ್ನ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸ ಇಟ್ಟುಕೊಂಡಿದ್ದಾರೆ. 75 ವರ್ಷ ದಾಟಿದ ಯಾರಿಗೂ ಜವಾಬ್ದಾರಿ ನೀಡಿಲ್ಲ. ಆದರೆ, ಬಿಎಸ್ವೈ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಹೀಗಾಗಿ ಅವರು ನನಗೆ ಅವಕಾಶ ಕೊಟ್ಟಿದ್ದಾರೆ ಎಂದರು.
ಮುಂದಿನ ವರ್ಷಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಜು.26ರಂದು ನಾನು ಅಧಿಕಾರಕ್ಕೆ ಬಂದು 2 ವರ್ಷ ಆಗಲಿದೆ. ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಪಕ್ಷದ ಎಲ್ಲರೂ ಇದೇ ರೀತಿ ಸಹಕಾರ ಕೊಡಬೇಕು. ಪಕ್ಷದ ಚಟುವಟಿಕೆಗಳ ಕಡೆಯತ್ತ ಗಮನಹರಿಸುತ್ತೇನೆ. ಮುಂದಿನ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಇದೆ. ನನ್ನ ಪರವಾಗಿ ಯಾರೂ ಹೇಳಿಕೆ ಕೊಡಬಾರದು, ಯಾರೂ ವರಷ್ಠರ ವಿರುದ್ಧ ಪ್ರತಿಭಟನೆ ಮಾಡಬಾರದು. ಮಠಾಧೀಶರು ಬಂದು ನನಗೆ ಬೆಂಬಲ ಸೂಚಿಸಿದ್ದಾರೆ. ಇಷ್ಟೊಂದು ಬೆಂಬಲ ಯಾರಿಗೂ ಸಿಕ್ಕಿರಲಿಲ್ಲ. ಇದು ನನ್ನ ಭಾಗ್ಯ ಎಂದು ಯಡಿಯೂರಪ್ಪ ಹೇಳಿದರು.
ಜು.25ರಂದು ವರಿಷ್ಠರಿಂದ ಸೂಚನೆ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವೆ. ಜು.26ರಂದು ನಾನು ಸಿಎಂ ಆಗಿ ಅಧಿಕಾರವಹಿಸಿಕೊಂಡು 2 ವರ್ಷ. ಸರ್ಕಾರದ ಸಾಧನಾ ಕಾರ್ಯಕ್ರಮ ಬಳಿಕ ವರಿಷ್ಠರ ಸೂಚನೆಯಂತೆ ನಡೆಯುತ್ತೇನೆ ಎಂದು ಪುನರುಚ್ಛರಿಸಿದರು.