ಹನೂರು: ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಕೊಡುಗೆ ಅಪಾರ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕೈವಾರ ತಾತಯ್ಯ ಎಂದೇ ಪ್ರಸಿದ್ಧ ಪಡೆದಿರುವ ಶ್ರೀ ಯೋಗಿ ನಾರೇಯಣ ಅವರು ಕೀರ್ತನೆ ಹಾಗೂ ತತ್ವಪದಗಳ ಮೂಲಕ ಮನೆ ಮಾತಾಗಿದ್ದರು. ಸಾವಿರಾರು ಕೀರ್ತನೆಗಳನ್ನು ರಚಿಸಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ವಚನ ಪಸರಿಸಿದರು. ಹಾಗಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಲು ಕೈವಾರ ತಾತಯ್ಯ ಅವರು ನಾಡಿಗೆ ಸ್ಫೂರ್ತಿಯಾಗಿದ್ದು, ಈ ದಿಸೆಯಲ್ಲಿ ಇವರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.
ತಹಸೀಲ್ದಾರ್ ಕೆ.ಎನ್.ಚೈತ್ರಾ, ಸೆಸ್ಕ್ ಎಇಇ ರಂಗಸ್ವಾಮಿ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಶಿಕ್ಷಣ ಸಂಯೋಜಕ ಮಹೇಶ್, ಬಲಿಜ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನ, ಮುಖಂಡರಾದ ರಂಗಸ್ವಾಮಿ, ಗೋಪಾಲ್, ಜಯರಾಮು, ನಾಗರಾಜು, ಬಸವರಾಜು, ವಿಜಯಕುಮಾರ್ ಇತರರು ಇದ್ದರು.
ಅಗ್ನಿಶಾಮಕ ಠಾಣೆಯಲ್ಲೂ: ಪಟ್ಟಣದ ಆರ್.ಎಸ್ ದೊಡ್ಡಿ ಹೊರವಲಯದಲ್ಲಿನ ಅಗ್ನಿಶಾಮಕ ಠಾಣೆಯಲ್ಲೂ ಮಂಗಳವಾರ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು. ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಪೆರಿಯನಾಯಗಂ, ಆನಂದ್, ಲಿಂಗೇಶ್, ಅಶೋಕ್, ನಾಗಪ್ಪ, ಅನಿಲ್, ಮನೋಹರ್ ಹಾಗೂ ಚಂದ್ರೇಗೌಡ ಇದ್ದರು.