ಯಳಂದೂರಿನಲ್ಲಿ ಈದ್ ಉಲ್ ಅದಾ ಸಂಭ್ರಮ

 ಯಳಂದೂರು ಪಟ್ಟಣದಲ್ಲಿ ಈದ್ಗಾ ಮೈದಾನದಲ್ಲಿ ಗುರುವಾರ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿಸುತ್ತಿರುವುದು.
ಯಳಂದೂರು ಪಟ್ಟಣದಲ್ಲಿ ಈದ್ಗಾ ಮೈದಾನದಲ್ಲಿ ಗುರುವಾರ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿಸುತ್ತಿರುವುದು.
Published on
ಯಳಂದೂರು: ತ್ಯಾಗ ಹಾಗೂ ಬಲಿದಾನಗಳ ಮಹತ್ವ ಸಾರುವ ಈದ್ ಉಲ್ ಅದಾ (ಬಕ್ರೀದ್) ಹಬ್ಬವನ್ನು ತಾಲೂಕಿನಾದ್ಯಂತ ಗುರುವಾರ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ಯಳಂದೂರು ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮುಂಜಾನೆಯ ಪ್ರಾರ್ಥನೆಯೊಂದಿಗೆ ಹಬ್ಬದ ಸಡಗರ ಕಳೆಕಟ್ಟಿತ್ತು. ಮಸೀದಿಯ ಮುಂಭಾಗ ಪಟ್ಟಣದ ಮುಸಲ್ಮಾನರು ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಮೆಕ್ಕಾದಲ್ಲಿ ಹಜ್ ಸಂಪನ್ನಗೊಂಡ ಮಾರನೇ ದಿನ ಎಲ್ಲೆಡೆ ಬಕ್ರೀದ್ ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಮುಸ್ಲಿಂ ಧರ್ಮಗುರುಗಳು ಹಬ್ಬದ ಧಾರ್ಮಿಕ ವಿಧಿಗಳು, ಇದರ ಮಹತ್ವದ ಬಗ್ಗೆ ಪ್ರವಚನ ನೀಡಿದರು. ನಂತರ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಂಡಿತು. ಬಣ್ಣಬಣ್ಣದ ಪೋಷಾಕುಗಳನ್ನು ಧರಿಸಿದ ಚಿಣ್ಣರು ಗಮನ ಸೆಳೆದರು. ಪರಸ್ಪರರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮೆರವಣಿಗೆಯ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆ ಆಚರಣೆ: ತಾಲೂಕಿನ ಮಾಂಬಳ್ಳಿ, ಯರಗಂಬಳ್ಳಿ, ಗುಂಬಳ್ಳಿ, ಯರಿಯೂರು ಚಾಮರಾಜನಗರ ತಾಲೂಕಿನ ಸಂತೇರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಇರಸವಾಡಿ, ಹೊಂಗನೂರು, ಮಸಣಾಪುರ, ಚಾಟೀಪುರ ಗ್ರಾಮಗಳಲ್ಲೂ ಈದ್ ಉಲ್ ಅದಾ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net