ಯಳಂದೂರಿನಲ್ಲಿ ಬುಧವಾರ ಪಟ್ಟಣ ಪಂಚಾಯಿತಿ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ, ನೈರ್ಮಲ್ಯ, ಬಳಸಿದ ನೀರಿನ ನಿರ್ವಹಣೆ ಸಂಬಂಧ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಮಹದೇವಸ್ವಾಮಿ, ಕವಿತಾ, ಮಲ್ಲಿಕಾರ್ಜುನ, ಪರಶಿವ, ಅರವಿಂದ, ಪ್ರಭುಸ್ವಾಮಿ ಇದ್ದರು.
ಯಳಂದೂರು : ಪಟ್ಟಣದ ಸ್ವಚ್ಛತೆ ಪಾಲನೆಗೆ ಎಲ್ಲರೂ ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮನವಿ ಮಾಡಿದರು.
ಅವರು ಬುಧವಾರ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಎಸ್‌ಬಿಎಂ-2.0 ಯೋಜನೆಯಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬಳಸಿದ ನೀರಿನ ನಿರ್ವಹಣೆ ಸಂಬಂಧ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡಬಾರದು. ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಪಂಚಾಯಿತಿಯ ವಾಹನಕ್ಕೆ ನೀಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದರು.
ಪ್ಲಾಸ್ಟಿಕ್ ಕವರ್ ಮಾರಾಟ ಕಾನೂನು ಬಾಹಿರವಾಗಿದೆ. ಇದನ್ನು ಮಾರಾಟ ಮಾಡುವ ಅಂಗಡಿಯವರಿಗೆ ಪರವಾನಗಿಯನ್ನೇ ರದ್ದು ಮಾಡಲಾಗುವುದು ಎಂದರು. ನೀರನ್ನು ಮಿತವಾಗಿ ಬಳಸಬೇಕು, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಪಟ್ಟಣದ ನಾಗರಿಕರು ಪಪಂ ನೊಂದಿಗೆ ಸಹಕರಿಸಿದರೆ ನೈರ್ಮಲ್ಯದೊಂದಿಗೆ ಉತ್ತಮ ಆರೋಗ್ಯವನ್ನೂ ತಮ್ಮದಾಗಿಸಕೊಳ್ಳಬಹುದು ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಘೋಷಣೆಯನ್ನು ಕೂಗಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಮಹದೇವಸ್ವಾಮಿ, ಕವಿತಾ, ಮಲ್ಲಿಕಾರ್ಜುನ, ಪರಶಿವ, ಅರವಿಂದ, ಪ್ರಭುಸ್ವಾಮಿ, ನಂದನ್ ಸೇರಿದಂತೆ ಅನೇಕರು ಇದ್ದರು.