ಕರ್ತವ್ಯಲೋಪ; ಯರಿಯೂರು ಪಿಡಿಒ ಅಮಾನತು

ತಾಲೂಕಿನ ಯರಿಯೂರು ಗ್ರಾಮದ ಪಿಡಿಒ ಶಿವವಕುಮಾರ್ ಅವರನ್ನು ಅಮಾನತುಪಡಿಸುವಂತೆ ಸಿಇಒ ಆದೇಶದ ಪತ್ರ.
ತಾಲೂಕಿನ ಯರಿಯೂರು ಗ್ರಾಮದ ಪಿಡಿಒ ಶಿವವಕುಮಾರ್ ಅವರನ್ನು ಅಮಾನತುಪಡಿಸುವಂತೆ ಸಿಇಒ ಆದೇಶದ ಪತ್ರ.
Published on
ಯಳಂದೂರು: ತಾಲೂಕಿನ ಯರಿಯೂರು ಗ್ರಾಮ ಪಂಚಾಯಿತಿ ಪಿಡಿಒ ಡಿ.ಶಿವಕುಮಾರ್ ಅವರನ್ನು ಅಮಾನತು ಮಾಡಿರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಮೋನಾರೋತ್ ಶುಕ್ರವಾರ ಆದೇಶಿಸಿದ್ದಾರೆ.
ತಾಲೂಕಿನ ಯರಿಯೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಾಗೂ ಕಮಾನು ಗೇಟ್ ಅಳವಡಿಸಲು ಅನುಮತಿ ಕೋರಿ ಮಾ.26ರಂದು ಮನವಿ ಸಲ್ಲಿಸಲಾಗಿತ್ತು. ಮನವಿ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಇತರೆಡೆ ಅಳವಡಿಸುವಂತೆ ಪಿಡಿಒ ಏ.14ರಂದು ಅನುಮತಿ ನೀಡಿದ್ದಾರೆ. ನಂತರ ಏ.19ರಂದು ಕಮಾನು ಗೇಟ್ ನಿರ್ಮಿಸಲು ಹೋದಾಗ ಅನುಮತಿ ನೀಡಿರುವ ಆದೇಶ ರದ್ದಾಗಿರುವುದಾಗಿ ತಿಳಿಸಿ ತಡೆಯೊಡ್ಡಿದ್ದಾರೆ. ಅನುಮತಿ ರದ್ದಾಗಿರುವ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಇದರಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧಕ್ಷರಾದ ಕೃಷ್ಣಮೂರ್ತಿ ಪಿಡಿಒ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಏ.22ರಂದು ಮನವಿ ಮಾಡಿದ್ದಾರೆ.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಸೂಚಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಪಿಡಿಒ ಡಿ. ಶಿವಕುಮಾರ್ ಏ.13ರ ಪಂಚಾಯಿತಿ ಸಾಮಾನ್ಯ ಸಭೆಯ ತೀರ್ಮಾನವನ್ನು ಉಲ್ಲಂಘಿಸಿ ಹಾಗೂ ಸದರಿ ಸ್ಥಳವು ಕರೆಯ ವ್ಯಾಪ್ತಿಗೆ ಬರುತ್ತಿದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕನಕದಾಸರ ಭಾವಚಿತ್ರವುಳ್ಳ ಕಮಾನು ಗೇಟ್ ನಿರ್ಮಿಸಲು ಅನುಮತಿ ನೀಡಿ, ನಂತರ ಇದನ್ನು ಗಮನಕ್ಕೆ ತಾರದೇ ಅನುಮತಿ ರದ್ದುಪಡಿಸುವ ಮೂಲಕ ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸಾಮಾನ್ಯ ಸಭೆ ಕರೆದು, ಸಭೆಯಲ್ಲಿ ಚರ್ಚಿಸಿ ಸಭೆಯ ತೀರ್ಮಾನದ ರೀತಿ ಕ್ರಮವಹಿಸಿಲ್ಲ. ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಕೋಮು ಗಲಭೆ ಉಂಟಾಗಲು ಕಾರಣರಾಗಿ, ಕರ್ತವ್ಯ ನಿರ್ವಹಿಸಲು ವಿಫಲವಾಗಿರುವುದು ಕಂಡುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net