ಯಳಂದೂರನ್ನು ಮಲೆನಾಡು ಅಭಿವೃದ್ಧಿ ಮಂಡಳಿಗೆ ಸೇರಿಸಿ

 ಯಳಂದೂರು ತಾಲೂಕಿನ ವಿಷಯಗಳ ಬಗ್ಗೆ ಬೆಳಗಾವಿಯ ವಿಧಾನಸಭೆಯ ಕಲಾಪದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
ಯಳಂದೂರು ತಾಲೂಕಿನ ವಿಷಯಗಳ ಬಗ್ಗೆ ಬೆಳಗಾವಿಯ ವಿಧಾನಸಭೆಯ ಕಲಾಪದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಆಗ್ರಹ
ಯಳಂದೂರು: ಯಳಂದೂರು ತಾಲೂಕು ಅನ್ನು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸುವ ಸಂಬಂಧ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಧ್ವನಿಯೆತ್ತಿದರು.
ಈ ಬಗ್ಗೆ ಉತ್ತರಿಸಿದ ಸಚಿವ ಡಿ.ಸುಧಾಕರ್, ಮಂಡಳಿಯ ಸರ್ವ ಸದಸ್ಯರ ಸಭೆಯ ನಿರ್ಣಯದಂತೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಹಾಗೂ ಹೊಸದಾಗಿ ಸೃಜನಗೊಂಡಿರುವ 11 ತಾಲೂಕುಗಳು ಒಳಗೊಂಡಂತೆ ಮಂಡಳಿಯ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆ ಸ್ವೀಕೃತಗೊಂಡಿದೆ. ಸದರಿ ತಾಲೂಕಿನ ವಾರ್ಷಿಕ ಮಳೆ, ವಾಡಿಕೆ ಮಳೆ, ಅರಣ್ಯ ಪ್ರದೇಶ, ಭೂಮಿಯ ತೇವಾಂಶ ಸೇರಿದಂತೆ ಮುಂತಾದ ಅಂಶಗಳನ್ನು ಅವಲೋಕಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಮಂಡಳಿಯ ಕಾಯ್ದೆಗೆ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು. ಜತೆಗೆ 2026-27ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ಹಂಚಿಕೆ ಮಾಡಲು ಬಜೆಟ್ ಸಂದರ್ಭದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ: ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಬಗ್ಗೆ ಅನುಮೋದನೆಗೊಂಡಿದ್ದು, ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದರು. ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಉತ್ತರಿಸಿ, ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ 66/11ಕೆವಿ ವಿದ್ಯುತ್ ಉಪಕೇಂದ್ರ ಪ್ರಸ್ತಾವನೆಯು ಜ.24 ರಂದು ನಡೆದ 1ನೇ ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡಿದ್ದು, ತಾಲೂಕಿನ ಅಗರ ಹೋಬಳಿ ವ್ಯಾಪ್ತಿಯ ಮಲಾರಪಾಳ್ಯ ಗ್ರಾಮದಲ್ಲಿ 2 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳಿಂದ ಮಂಜೂರಾಗಿರುತ್ತದೆ, ಭೂಮಿಗೆ ಹಣ ಪಾವತಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಉಪಕೇಂದ್ರದ ಸ್ಥಾಪನೆ 66 ಕೆ.ವಿ ಮಾರ್ಗದ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net