4 ತಿಂಗಳ ವೇತನ ಮಂಜೂರು ಮಾಡದಿದ್ದರೆ ಕೆಲಸ ಸ್ಥಗಿತ

ಕೊಳ್ಳೇಗಾಲದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನೀರು ಸರಬರಾಜು ಹೊರಗುತ್ತಿಗೆ ಪೌರ ನೌಕರರ ಸಂಘದ ಸದಸ್ಯರು ಒಗ್ಗಟ್ಟು ಪ್ರದರ್ಶಿಸುತ್ತಿರುವುದು.
ಕೊಳ್ಳೇಗಾಲದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನೀರು ಸರಬರಾಜು ಹೊರಗುತ್ತಿಗೆ ಪೌರ ನೌಕರರ ಸಂಘದ ಸದಸ್ಯರು ಒಗ್ಗಟ್ಟು ಪ್ರದರ್ಶಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನೀರು ಸರಬರಾಜು ಹೊರಗುತ್ತಿಗೆ ಪೌರನೌಕರರ ಸಂಘದ ಅಧ್ಯಕ್ಷ ಪುಟ್ಟಮಾದು ಎಚ್ಚರಿಕೆ
ಕೊಳ್ಳೇಗಾಲ: ಇಲ್ಲಿನ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ನೀರು ಸರಬರಾಜು ಪೌರ ನೌಕರರಿಗೆ ಬಾಕಿ ಉಳಿದಿರುವ 4 ತಿಂಗಳ ವೇತನವನ್ನು ಮಂಜೂರು ಮಾಡದಿದ್ದರೆ ಮೇ 8ರಿಂದ ಕೆಲಸ ಸ್ಥಗಿತಗೊಳಿಸಲು ಸಂಘಟನೆ ತೀರ್ಮಾನಿಸಿದೆ ಎಂದು ನೀರು ಸರಬರಾಜು ಹೊರಗುತ್ತಿಗೆ ಪೌರನೌಕರರ ಸಂಘದ ಅಧ್ಯಕ್ಷ ಪುಟ್ಟಮಾದು ತಿಳಿಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ಆಯೋಜಿಸಿದ್ದ ನೀರು ಸರಬರಾಜು ಹೊರಗುತ್ತಿಗೆ ಪೌರ ನೌಕರರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು. ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 36 ವಾಟರ್‌ಮನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಕಡಿಮೆ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಈ ನಡುವೆ 4 ತಿಂಗಳಿನಿಂದ ಸಂಬಳವಾಗಿಲ್ಲ. ಪೌರಾಯುಕ್ತರನ್ನು ಕೇಳಿದರೆ ಸ್ಪಂದಿಸುತ್ತಿಲ್ಲ. ಆದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಳವಾಗದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಬೇಸಿಗೆ ಸಂದರ್ಭದಲ್ಲಿ ನೀರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸುತ್ತಿದ್ದು, ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು. ಬಾಕಿ ಉಳಿದಿರುವ ವಾಟರ್‌ಮನ್‌ಗಳ ವೇತನವನ್ನು ಸಂಬಂಧ ಪಟ್ಟವರಿಂದ ಮಂಜೂರು ಮಾಡಿಸಬೇಕು. ಪ್ರತಿ ತಿಂಗಳು ವಾಟರ್‌ಮನ್‌ಗಳಿಗೆ ಸಂಬಳ ಆಗುವಂತೆ ಕ್ರಮವಹಿಸಬೇಕು. ಸಾರ್ವಜನಿಕರೂ ನಮಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನೀರು ಸರಬರಾಜು ಹೊರಗುತ್ತಿಗೆ ಪೌರನೌಕರರ ಸಂಘದ ಉಪಾಧ್ಯಕ್ಷ ಬಸವರಾಜು, ಖಜಾಂಚಿ ಸುರೇಶ್, ಕೃಷ್ಣಸ್ವಾಮಿ, ಸೋಮಣ್ಣ, ಶ್ರೀನಿವಾಸ್, ಮಹದೇವ, ನವೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net