ಅಜ್ಜೀಪುರ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

ಹನೂರಿನಿಂದ ಅಜ್ಜೀಪುರಕ್ಕೆ ತೆರಳುವ ಮಾರ್ಗದಲ್ಲಿ ಕಾಣಿಸಿಕೊಂಡ ಕಾಡಾನೆ.
ಹನೂರಿನಿಂದ ಅಜ್ಜೀಪುರಕ್ಕೆ ತೆರಳುವ ಮಾರ್ಗದಲ್ಲಿ ಕಾಣಿಸಿಕೊಂಡ ಕಾಡಾನೆ.
Published on
ಹನೂರು: ಪಟ್ಟಣದಿಂದ ಅಜ್ಜೀಪುರಕ್ಕೆ ತೆರಳುವ ಮಾರ್ಗದಲ್ಲಿ ಭಾನುವಾರ ಸಂಜೆ ಕಾಡಾನೆಯೊಂದು ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿತು.
ಮಲೆಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯಕ್ಕೆ ಸೇರಿದ ಈ ಮಾರ್ಗವು ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಈ ಮಾರ್ಗವು ರಾಮಾಪುರದ ಮೂಲಕ ತಮಿಳುನಾಡು ಸೇರಿದಂತೆ ಈ ಭಾಗದ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಆದರೆ ಈ ಮಾರ್ಗದ ಅರಕನಹಳ್ಳ ಬಳಿ ಆಗ್ಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತದೆ. ಭಾನುವಾರ ಮಧ್ಯಾಹ್ನ ಈ ಮಾರ್ಗದಲ್ಲಿ ಕಾಡಾನೆಯೊಂದು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾದರು. ಬಳಿಕ ಕಾಡಾನೆ ರಸ್ತೆಯನ್ನು ದಾಟಿ ಅರಣ್ಯ ಪ್ರದೇಶದೊಳಗೆ ತೆರಳಿತು. ಬಳಿಕ ವಾಹನ ಸವಾರರು ನಿಟ್ಟುಸಿರು ಬಿಟ್ಟು ಸಂಚಾರ ಮುಂದುವರಿಸಿದರು. ಕಾಡಾನೆ ಸಂಚಾರದ ದೃಶ್ಯವನ್ನು ಸಾರ್ವಜನಿಕರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಈ ಮಾರ್ಗದ ಅರಕನಹಳ್ಳದ ಬಳಿಯ ಹಳ್ಳದಲ್ಲಿ ನೀರು ಕಡಿಯಲು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳು ಆಗಮಿಸುತ್ತವೆ. ಈ ವೇಳೆ ರಸ್ತೆ ಬದಿಗೂ ಕಾಡಾನೆಗಳು ಆಗಮಿಸುವುದರಿಂದ ವಾಹನ ಸವಾರರಿಗೆ ತೊಂದರೆಯಾಗಲಿದೆ. ಈ ಮಾರ್ಗದಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಗಮನದಲ್ಲಿದೆ. ಆದರೆ ಯಾವುದೇ ಕ್ರಮವಹಿಸದ ಪರಿಣಾಮ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಈ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಕಾಡಾನೆ ರಸ್ತೆ ಬದಿಗೆ ಬಾರದಂತೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net