ತವರಿನಿಂದ ಬಾರದ ಪತ್ನಿ, ಪತಿ ಆತ್ಮಹತ್ಯೆ

 ಮೋಹನ್‌ಕುಮಾರ್
ಮೋಹನ್‌ಕುಮಾರ್
Published on
ಹನೂರು: ತವರು ಮನೆಗೆ ತೆರಳಿದ್ದ ಪತ್ನಿ ಮೂರು ದಿನ ಕಳೆದರೂ ವಾಪಸಾಗದ ಹಿನ್ನೆಲೆಯಲ್ಲಿ ಬೇಸತ್ತ ಪತಿ ಸೋಮವಾರ ಮದ್ಯದ ಜತೆಗೆ ಲಾರಿಯ ರೇಡಿಯೇಟರ್‌ಗೆ ಹಾಕುವ ಆಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲೂಕಿನ ಬಿದರಹಳ್ಳಿ ಗ್ರಾಮದ ಮೋಹನ್‌ಕುಮಾರ್ (38) ಮೃತರು. ಲಾರಿ ಚಾಲಕರಾಗಿರುವ ಅವರು, ಕಾರ್ಯನಿಮಿತ್ತ ಬೇರೆಡೆ ತೆರಳಿ ಸೋಮವಾರ ಗ್ರಾಮಕ್ಕೆ ಆಗಮಿಸಿದ್ದರು. ಆದರೆ, ಪತ್ನಿ ಸರೋಜಾ ತವರು ಮನೆ ಅರಬಗೆರೆ ಗ್ರಾಮಕ್ಕೆ ತೆರಳಿ 3 ದಿನ ಕಳೆದರೂ ಮನೆಗೆ ವಾಪಸಾಗಿರಲಿಲ್ಲ. ಇದರಿಂದ ಬೇಸತ್ತ ಇವರು ಪತ್ನಿಗೆ ಫೋನ್ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಮದ್ಯದ ಜತೆಗೆ ಆಯಿಲ್ ಕುಡಿದಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ತುರ್ತುವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟರು.
ರಾಮಾಪುರ ಪೊಲೀಸ್ ಠಾಣೆಯ ಎಎಸ್‌ಸೈ ಚಿಕ್ಕಕಾಳೇಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net