ಬಿ.ಆರ್.ಟಿ ಕಾಡಂಚಿನಲ್ಲಿ ಜಲಮೂಲಗಳಿಗೆ ಕನ್ನ

ಯಳಂದೂರು ತಾಲೂಕಿನ ಮಲಾರಪಾಳ್ಯ, ಗೌಡಹಳ್ಳಿ ಗ್ರಾಮದ ಹೊರ ಪ್ರದೇಶದಲ್ಲಿ ಸರ್ಕಾರಿ ಕರಿಕಲ್ಲು ಹೊಂಡದ ನೀರನ್ನು ಅಕ್ರಮವಾಗಿ ಟ್ರಾೃಕ್ಟರ್ ಮೂಲಕ ಸಂಗ್ರಹ ಮಾಡುತ್ತಿರುವುದು.
ಯಳಂದೂರು ತಾಲೂಕಿನ ಮಲಾರಪಾಳ್ಯ, ಗೌಡಹಳ್ಳಿ ಗ್ರಾಮದ ಹೊರ ಪ್ರದೇಶದಲ್ಲಿ ಸರ್ಕಾರಿ ಕರಿಕಲ್ಲು ಹೊಂಡದ ನೀರನ್ನು ಅಕ್ರಮವಾಗಿ ಟ್ರಾೃಕ್ಟರ್ ಮೂಲಕ ಸಂಗ್ರಹ ಮಾಡುತ್ತಿರುವುದು.
Published on
ಡಿ.ಪಿ.ಮಹೇಶ್ ಯಳಂದೂರು
ತಾಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶದ ಸಮೀಪದ ಸರ್ಕಾರಿ ಹಳ್ಳ, ಕೊಳ್ಳ, ಕಟ್ಟೆ, ಕರಿಕಲ್ಲು ಕ್ವಾರಿಗಳ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರಿನ ಮೂಲವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಸಾಗಿಸಲಾಗುತ್ತಿದೆ.
ಇದರಿಂದ ಕುಡಿಯುವ ನೀರಿಲ್ಲದೆ ಪ್ರಾಣಿಗಳ ಗಂಟಲು ಒಣಗುವ ಆತಂಕ ನಿರ್ಮಾಣವಾಗಲಿದೆ.!
ತಾಲೂಕಿನ ಗೌಡಹಳ್ಳಿ, ಆಮೆಕೆರೆ ಸುತ್ತಮುತ್ತಲಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯದಂಚಿನ ಕರಿ ಕಲ್ಲು ಕ್ವಾರಿಗಳು, ಹಳ್ಳ-ಕೊಳ್ಳ, ನೀರಿನ ಹೊಂಡಗಳಿಂದ ರಸ್ತೆ, ಚರಂಡಿ ಕಾಮಗಾರಿ ಹಾಗೂ ಸಣ್ಣಪುಟ್ಟ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಅಕ್ರಮವಾಗಿ ನೀರು ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾಡು ಪ್ರಾಣಿಗಳ ಕುಡಿಯುವ ಜಲದ ಆಸರೆಗಳಲ್ಲಿ ಒಂದಾಗಿರುವ ಈ ಮೂಲಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಅವುಗಳನ್ನು ಬತ್ತುವ ಹಂತಕ್ಕೆ ತಲುಪಿಸುವ ಕುಕೃತ್ಯದ ಬಗ್ಗೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯದ ಆಮೆಕೆರೆ, ಗೌಡಹಳ್ಳಿ ಸೇರಿದಂತೆ ಪ್ರಮುಖ ಕೆರೆಗಳಲ್ಲಿ ಈ ಬಾರಿ ನೀರು ಖಾಲಿಯಾಗಿದೆ. ಗೌಡಹಳ್ಳಿ ಸಮೀಪದ ಮಲಾರಪಾಳ್ಯ ಗ್ರಾಮದ ಕಾಡಂಚಿನಲ್ಲಿ ಮಳೆ ನೀರಿನಿಂದ ಸಂಗ್ರಹವಾಗಿರುವ ನೈಸರ್ಗಿಕ ಹೊಂಡಗಳೇ ಜಲ ಕಳ್ಳರ ಗುರಿಯಾಗಿದೆ. ಸರ್ಕಾರಿ ರಸ್ತೆ, ಕಾಮಗಾರಿ, ಚರಂಡಿ ನಿರ್ಮಾಣ ಹಾಗೂ ನೂಲು ಬಿಚ್ಚುವ ಕಾರ್ಖಾನೆಗಳಿಗೆ ಪ್ರತಿದಿನ ಟ್ಯಾಂಕರ್ ಗಳ ಮೂಲಕ ನೀರನ್ನು ಇಲ್ಲಿಂದ ಅಕ್ರಮವಾಗಿ ಸಾಗಿಸಲಾಗುತ್ತದೆ.
ಸ್ಥಳೀಯರ ಪ್ರಕಾರ, ಗುತ್ತಿಗೆದಾರರು ಯಾವುದೇ ಅನುಮತಿ ಇಲ್ಲದೆ, ಗ್ರಾ.ಪಂ. ಅಥವಾ ಅರಣ್ಯ ಇಲಾಖೆಗೆ ಮಾಹಿತಿಯನ್ನೂ ನೀಡದೆ ನೀರು ಕದಿಯುವ ಕೃತ್ಯವನ್ನು ನಿರಂತರವಾಗಿ ಎಸಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನ ನೀಡುತ್ತಿಲ್ಲ. ನೀರು ಕದಿಯುವ ಮೂಲಗಳು ಅರಣ್ಯದ ಬಫರ್ ವಲಯದಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ವ್ಯಾಪ್ತಿಗೆ ಒಳಪಡಲಿದ್ದು, ನೀರು ಕಳ್ಳತನದ ಬಗ್ಗೆ ಕ್ರಮ ವಹಿಸಬೇಕಿದೆ.
ವನ್ಯಜೀವಿಗಳಿಗೆ ಸಂಕಟ:
ಬಿಆರ್‌ಟಿ ಅರಣ್ಯದಿಂದ ಆನೆ, ಜಿಂಕೆ, ಕಾಡೆಮ್ಮೆ, ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳು ಸಂಜೆ, ರಾತ್ರಿ ವೇಳೆ ನೀರು ಕುಡಿಯಲು ಹಳ್ಳ-ಕೊಳ್ಳಗಳಿಗೆ ಬರುತ್ತವೆ. ಈ ತಾಣಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಪ್ರಾಣಿಗಳು ನೀರು ಅರಸಿ ಗ್ರಾಮಗಳಿಗೂ ದಾಳಿ ಇಡುವ ಆತಂಕ ಎದುರಾಗಿದೆ.ವಿವಿಧ ಕಾಮಗಾರಿ ನಡೆಸುವವರು, ಗುತ್ತಿಗೆದಾರರು ನಿರಂತರವಾಗಿ ಹಳ್ಳ, ಕೊಳ್ಳ, ಕ್ವಾರಿಗಳಿಂದ ನೀರು ತೆಗೆಯುವುದರಿಂದ ನೀರಿನ ಮಟ್ಟ ಕೆಳಕ್ಕೆ ಇಳಿದಿದೆ. ಮಳೆಗಾಲ ಇದ್ದರೂ ಈ ಬಾರಿ ಸಮರ್ಪಕವಾಗಿ ಮಳೆಯಾಗದ ಕಾರಣ ಕೊಳ್ಳ ಮತ್ತು ಹೊಂಡದ ನೀರು ವನ್ಯ ಜೀವಿಗಳಿಗೆ ಆಸರೆಯಾಗಲಿದೆ. ಇವೆಲ್ಲವೂ ಜಲಕಳ್ಳರಿಂದ ಬತ್ತಿಹೋದರೆ ಅದರ ಅಪಾಯವನ್ನು ಕಾಡಂಚಿನ ಗ್ರಾಮದ ಜನರೇ ಅನುಭವಿಸಬೇಕಾಗಿದೆ.
ವಿವಿಧ ರೀತಿಯ ಕಾಮಗಾರಿಗಳಿಗೆ ಬೇಕಾದರೆ ಅಧಿಕೃತ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಿಕೊಳ್ಳಲಿ.
ಆದರೆ ದನ, ಕರು ಹಾಗೂ ಕಾಡು ಪ್ರಾಣಿಗಳ ಪಾಲಿನ ನೀರನ್ನು ಈ ರೀತಿಯಾಗಿಯೂ ಕದಿಯೋದು ಯಾವ ನ್ಯಾಯ ಎಂಬುದು ಆಮೆಕೆರೆ ಗ್ರಾಮದ ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೂ ಈ ಬಗ್ಗೆ ಸಂಬಂಧಪಟ್ಟ
ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳು ಗಮನ ಹರಿಸದೇ ಕಣ್ಣು ಮುಚ್ಚಿಕೊಂಡು ಕುಳಿತಿರುವುದೇ ದುರಂತವಾಗಿದೆ.
ಕೋಟ್)
ಗ್ರಾಮದ ಸುತ್ತಮುತ್ತಲ ದೊಡ್ಡ ಕೆರೆ, ಕಟ್ಟೆಗಳಲ್ಲಿ ನೀರು ಖಾಲಿಯಾಗಿದೆ. ರಸ್ತೆ, ಚರಂಡಿ ಕಾಮಗಾರಿ ಹಾಗೂ ಸಣ್ಣಪುಟ್ಟ ಕಾರ್ಖಾನೆಗಳಿಗೆ ನೀರು ಬಹಳ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯದೊಳಗಿನ ಕ್ವಾರಿ, ಕಟ್ಟೆಗಳಲ್ಲಿರುವ ನೀರು ಕದಿಯುವುದು ಸಲ್ಲದು. ವನ್ಯ ಪ್ರಾಣಿ, ಪಕ್ಷಿಗಗಳಿಗೆ
ನಿಸರ್ಗವು ಕಲ್ಪಿಸಿದ ವ್ಯವಸ್ಥೆಯನ್ನು ಹಾಳು ಮಾಡಬಾರದು. ಕೊಳ್ಳ, ಕ್ವಾರಿ, ಹೊಂಡಗಳಿಂದ ಅಕ್ರಮವಾಗಿ ನೀರು ಸಾಗಣೆ ಮಾಡುವುದನ್ನು ನಿಲ್ಲಿಸಲು ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.
ಪ್ರದೀಪ್
ರೈತ, ಮಲಾರಪಾಳ್ಯ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಸರ್ಕಾರಿ ಕೆರೆ, ಕಟ್ಟೆಗಳಲ್ಲಿ ಈಗ ಸಲ್ಪವಾದರೂ ನೀರಿದೆ. ಇದನ್ನು ದನ ಕರುಗಳು, ಪ್ರಾಣಿ, ಪಕ್ಷಿಗಳು ಕುಡಿಯಲು ಬಿಡಬೇಕು. ಆದರೆ ಇದನ್ನು ಕೆಲವರು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಕೆಲ ರೈತರು ದೂರು ನೀಡಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂ. ಗುರು
ಗ್ರಾಮ ಲೆಕ್ಕಾಧಿಕಾರಿ, ಗೌಡಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net